ಸಾಲು ಸಾಲು ಹಿಟ್ ಸಾಂಗ್ಸ್ ಮೂಲಕ ಸಂಗೀತ ಪ್ರಿಯರ ಗಮನ ಸೆಳೆದಿರುವ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೀಗ ತಮ್ಮ ವೃತ್ತಿ ಜೀವನದ ಪ್ರಮುಖ ಘಟ್ಟ ತಲುಪಿದ್ದಾರೆ. ಚಿತ್ರೋದ್ಯಮಕ್ಕೆ ಬಂದು 21 ವರ್ಷಗಳಾಗಿವೆ. ಸ್ವತಂತ್ರ್ಯ ಸಂಗೀತ ನಿರ್ದೇಶಕರಾಗಿ ಸಿನಿರಂಗದಲ್ಲಿ ಸುದೀರ್ಘ ಒಂದು ದಶಕಕ್ಕೂ ಹೆಚ್ಚು ಕಾಲದಿಂದಿದ್ದಾರೆ. ತಮ್ಮ ಕೆರಿಯರ್‌ನಲ್ಲಿ 50 ಸಿನಿಮಾಗಳಿಗೆ ಸಂಗೀತ ನೀಡಿ ಸಾಧನೆ ಮಾಡಿದ್ದಾರೆ.
2022ರ ಸೂಪರ್ ಹಿಟ್ 'ಕಾಂತಾರ' ಸಿನಿಮಾ ಅಜನೀಶ್ ಲೋಕನಾಥ್ ವೃತ್ತಿ ಬದುಕಿನಲ್ಲಿ ದೊಡ್ಡ ಮೈಲಿಗಲ್ಲಾಯಿತು. ಕರ್ನಾಟಕದ ಸಿನಿ ಪ್ರೇಮಿಗಳಷ್ಟೇ ಅಲ್ಲದೇ ಬಹುಭಾಷಿಕರೂ ಈ ಸಿನಿಮಾವನ್ನು ಮೆಚ್ಚಿಕೊಂಡರು. ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿಗೂ ಈ ಸಿನಿಮಾ ಭಾಜನವಾಗಿದೆ. ಕನ್ನಡದ ಮುಂಬರುವ ಬಹುನಿರೀಕ್ಷಿತ ಪ್ರಾಜೆಕ್ಟ್ಗಳಾದ 'ಮ್ಯಾಕ್ಸ್', 'ಬಘೀರ', 'ಯುಐ' ಸಿನಿಮಾಗಳಿಗೂ ಅಜನೀಶ್ ಸಂಗೀತ ಒದಗಿಸಿದ್ದಾರೆ. ಈ ಸುಧೀರ್ಘ ಪಯಣದ ಬಗ್ಗೆ ಸಂಗೀತ ನಿರ್ದೇಶಕರು ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಅಜನೀಶ್ ಲೋಕನಾಥ್ ಮನದಾಳ:" ಸಿನಿರಂಗದಲ್ಲಿ ಕೆಲಸ ಶುರುಮಾಡಿ 21 ವರ್ಷಗಳಾಯ್ತು. 2003ರಲ್ಲಿ ಕೆಲಸ ಶುರು ಮಾಡಿದೆ. ಆರಂಭದಲ್ಲಿ ಕೀ ಬೋರ್ಡ್ ಪ್ಲೇಯರ್ ಆಗಿದ್ದೆ. 2005ರಿಂದ ಸಿನಿಮಾಗಳಿಗೆ ಚಿಕ್ಕ ಪುಟ್ಟದಾಗಿ ಮ್ಯೂಸಿಕ್ ಮಾಡಿದೆ. ಆದರೆ ಯಾವುದೂ ರಿಲೀಸ್ ಆಗಲಿಲ್ಲ. ಒಳ್ಳೆ ಸಿನಿಮಾ ಸಿಗುತ್ತಿರಲಿಲ್ಲ. 2010ರಲ್ಲಿ ಬಂದ 'ಶಿಶಿರ' ಕೈ ಹಿಡಿಯಿತು. ಅದಾದ ಮೇಲೆ 'ಉಳಿದವರು ಕಂಡಂತೆ' ಚಿತ್ರ ಒಳ್ಳೆಯ ಹೆಸರು ತಂದುಕೊಟ್ಟಿತು. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಂದಲೂ ಪ್ರಶಂಸೆ ಸಿಗಲಾರಂಭಿಸಿತು. ರಂಗಿತರಂಗ ಚಿತ್ರದಿಂದ ಕಮರ್ಷಿಯಲ್ ಸಕ್ಸಸ್ ಸಿಕ್ತು. ಕಿರಿಕ್ ಪಾರ್ಟಿ ಸಿನಿಮಾದಿಂದ ತೆಲುಗಿನಲ್ಲಿಯೂ ಅವಕಾಶ ಸಿಕ್ಕಿತು. ಹೀಗೆ ಇದೀಗ 50 ಅನ್ನೋ ನಂಬರ್‌ಗೆ ಬಂದು ತಲುಪಿದ್ದೇನೆ" ಎಂದು ಹರ್ಷ ಹಂಚಿಕೊಂಡರು.
"ಸಿನಿಮಾಗಾಗಿ ಕೆಲಸ ಮಾಡಬೇಕೆಂಬುದೇ ನನ್ನ ಕನಸು. ನಾನು ಸಿನಿಮಾದವನು. ಸಂಗೀತದವನು ಎನ್ನುವ ಬದಲು ಸಿನಿಮಾದವನು ಅನ್ನೋ ಫೀಲ್‌ನಲ್ಲೇ ನಾನು ಕೆಲಸ ಮಾಡುತ್ತೇನೆ. ನನ್ನ ದೃಷ್ಠಿಕೋನದ ಜೊತೆಗೆ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು ಮತ್ತು ಕಲಾವಿದರ ಪಾಯಿಂಟ್ ಆಫ್ ವ್ಯೂವ್‌ನಲ್ಲಿಯೂ ನಾನು ಕೆಲಸ ಮಾಡುತ್ತೇನೆ. ನನ್ನ ಮ್ಯೂಸಿಕ್‌ನಿಂದ ಒಂದು ಸಿನಿಮಾ ಹಿಟ್ ಆಗಬಹುದು. ಒಂದು ಸಿನಿಮಾದಲ್ಲಿ ಒಂದೆರಡು ಹಾಡು ಹಿಟ್ ಆಗಬೇಕೆನ್ನೋ ದೃಷ್ಠಿಯಲ್ಲೇ ನಾನು ಕೆಲಸ ಮಾಡುತ್ತೇನೆ" ಎಂದು ತಿಳಿಸಿದರು.
"ವರ್ಷಕ್ಕೆ ಮೂರ್ನಾಲ್ಕು ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆಂದರೂ, ಮೂರು ತಿಂಗಳಿಗೆ ಒಂದು ಸಿನಿಮಾ ಆಗುತ್ತದೆ. ಇಲ್ಲಿ ಏನನ್ನು ಕೊಡಬೇಕು, ಹೇಗಿರಬೇಕು ಎಂಬ ಆ ಪ್ರೊಸೆಸ್‌ಗೆ ಹೆಚ್ಚು ಸಮಯ ಬೇಕೇ ಹೊರತು, ಮ್ಯೂಸಿಕ್ ಮಾಡಲು ಅಲ್ಲ. ಅದೇ ರೀತಿ ಮ್ಯಾಕ್ಸ್ ಸಿನಿಮಾ, ಯುಐ ಸಿನಿಮಾಗಳನ್ನು ನೋಡಿದ ಮೇಲೆ ಮ್ಯೂಸಿಕ್ ಸಖತ್ ಸೂಟ್ ಆಗಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಅಂಶಗಳನ್ನೂ ಸಂಗೀತದ ಮೂಲಕ ನೀಡಿದ್ದೇನೆ. ನೋಡುಗನಿಗೆ ಒಂದೊಳ್ಳೆ ಟ್ರೀಟ್ ಈ ಸಿನಿಮಾಗಳ ಮೂಲಕ ಸಿಗಲಿದೆ'' ಎಂದು ತಿಳಿಸಿದರು.