ಮುಂಬೈ (ಮಹಾರಾಷ್ಟ್ರ):ಬಾಲಿವುಡ್ನಟ ಸಲ್ಮಾನ್ ಖಾನ್ ಮೇಲಿನ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆಗಿನ ವೈಷಮ್ಯ ಕೊನೆಗೊಳಿಸಲು 5 ಕೋಟಿ ರೂ. ನೀಡುವಂತೆ ಇತ್ತೀಚೆಗೆ ಬೆದರಿಕೆ ಹಾಕಿದ ವ್ಯಕ್ತಿ ಇದೀಗ ಕ್ಷಮೆಯಾಚಿಸಿರುವುದಾಗಿ ಮಾಹಿತಿ ಸಿಕ್ಕಿದೆ.
ಈ ವಿಚಾರವನ್ನು ಲಘುವಾಗಿ ಪರಿಗಣಿಸಬೇಡಿ. ಸಲ್ಮಾನ್ ಖಾನ್ ಬದುಕಬೇಕು, ಲಾರೆನ್ಸ್ ಬಿಷ್ಣೋಯ್ ಜೊತೆಗಿನ ವೈಷಮ್ಯವನ್ನು ಕೊನೆಗಾಣಿಸಬೇಕೆಂದರೆ 5 ಕೋಟಿ ರೂ. ನೀಡಬೇಕು. ಹಣ ಪಾವತಿ ಮಾಡದಿದ್ದರೆ, ಸಲ್ಮಾನ್ ಕಾನ್ ಪರಿಸ್ಥಿತಿ ಬಾಬಾ ಸಿದ್ದಿಕಿ ರೀತಿ ಆಗುತ್ತದೆ. ಅದಕ್ಕಿಂತಲೂ ಕೆಟ್ಟದಾಗಬಹುದೆಂದು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸ್ಆ್ಯಪ್ ಸಂಖ್ಯೆಗೆ ಬೆದರಿಕೆ ಸಂದೇಶವೊಂದು ಬಂದಿತ್ತು. ಇದೀಗ ಅದೇ ಸಂಖ್ಯೆಯಿಂದ ಟ್ರಾಫಿಕ್ ಪೊಲೀಸರ ವಾಟ್ಸ್ಆ್ಯಪ್ಗೆ ಮತ್ತೊಂದು ಸಂದೇಶ ಬಂದಿದೆ.
ಬೆದರಿಕೆ ಹಾಕಿದ ವ್ಯಕ್ತಿ ಕ್ಷಮೆಯಾಚಿಸಿರುವ ಮಾಹಿತಿ ಕೂಡ ಇದೆ. ''ನಾನು ಈ ಸಂದೇಶವನ್ನು ತಪ್ಪಾಗಿ ಕಳುಹಿಸಿದ್ದೇನೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ'' ಎಂದು ಬೆದರಿಕೆ ಹಾಕಿದ ವ್ಯಕ್ತಿಯೇ ಪುನಃ ಹೀಗೆ ಮೆಸೇಜ್ ಕಳುಹಿಸಿರುವ ಮಾಹಿತಿ ಇದೆ. ಜಾರ್ಖಂಡ್‌ನಲ್ಲಿ ಈ ಮೆಸೇಜ್ ಕಳುಹಿಸಿದ ವ್ಯಕ್ತಿ ಇರುವ ಸ್ಥಳವನ್ನು ಪತ್ತೆ ಮಾಡಿದ್ದು ಸದ್ಯ ಆತನ ಹುಡುಕಾಟದಲ್ಲಿ ಪೊಲೀಸ್ ತಂಡ ಅಲ್ಲಿಗೆ ಹೋಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.