''ಪುಷ್ಪ: ದಿ ರೈಸ್'' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಸಿನಿಮಾ ಸುತ್ತಲಿರುವ ಕ್ರೇಜ್ ಈಗಾಗಲೇ ಸ್ಪಷ್ಟವಾಗಿದೆ. ಆದ್ರೆ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದ್ದು ಮಾತ್ರ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
'ಪುಷ್ಪ 2: ದಿ ರೂಲ್'ನ ಪುಷ್ಪ ರಾಜ್ ಮತ್ತು ಶ್ರೀವಲ್ಲಿ ಪಾತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಂದುವರಿದಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆಗಸ್ಟ್ 15 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈ ಮೊದಲು ತಿಳಿಸಿದ್ದು, ಅಭಿಮಾನಿಗಳು ಉತ್ಸಾಹದಲ್ಲಿದ್ದರು. ಆದ್ರೆ ನಿನ್ನೆಯಷ್ಟೇ ಪುಷ್ಪ ಸೀಕ್ವೆಲ್ನ ಬಿಡುಗಡೆ ದಿನಾಂಕವನ್ನು ಡಿಸೆಂಬರ್ 6ಕ್ಕೆ ಮುಂದೂಡಲಾಗಿದೆ ಎಂದು ಚಿತ್ರತಯಾರಕರು ಅಧಿಕೃತವಾಗಿ ಘೋಷಿಸಿದ್ದಾರೆ. ರಶ್ಮಿಕಾ - ವಿಕ್ಕಿ ಕೌಶಲ್ ಜೋಡಿಯ ಛಾವಾ ಚಿತ್ರ ಕೂಡ ಡಿಸೆಂಬರ್ 6ಕ್ಕೆ ತೆರೆಗಪ್ಪಳಿಸಲು ಸಜ್ಜಾಗಿದೆ.
ಬಾಕಿ ಉಳಿದಿರುವ ಚಿತ್ರೀಕರಣ ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಸಾಕಷ್ಟು ಇರುವುದರಿಂದ, ಸಿನಿಮಾ ಮುಂದೂಡಲ್ಪಟ್ಟಿದೆ. ಈ ಚಿತ್ರದ ಮೇಲಿನ ನಿರೀಕ್ಷೆಗಳು ಶಿಖರದಷ್ಟಿರುವ ಹಿನ್ನೆಲೆ, ಸಿನಿಮಾದ ಗುಣಮಟ್ಟದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಚಿತ್ರತಂಡ ಸಿದ್ಧವಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ದಿನ ಮುಂದೂಡಲ್ಪಟ್ಟಿದೆ. ಆದ್ರೆ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದೆ. ಕೆಲ ಅಭಿಮಾನಿಗಳು ತಮ್ಮ ಆಕ್ರೋಶ, ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಹಲವರು ಚಿತ್ರತಂಡದ ಈ ನಿರ್ಧಾರದ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ.
ನಿರಾಶೆಗೊಂಡ ಅಭಿಮಾನಿಯೊಬ್ಬರು ಟ್ವಿಟರ್ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪ್ರೇಕ್ಷಕರ ಭಾವನೆಗಳೊಂದಿಗೆ ಚಲನಚಿತ್ರ ನಿರ್ಮಾಪಕರು ಆಟವಾಡುತ್ತಿದ್ದಾರೆ ಎಂದು ಆರೋಪಿಸಿ, ಶೀಘ್ರ ಬಿಡುಗಡೆಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.