ಕರ್ನಾಟಕ

karnataka

ETV Bharat / entertainment

ಮಲಯಾಳಂ ಚಿತ್ರರಂಗದಲ್ಲಿ ಶಕ್ತಿಕೇಂದ್ರವಿಲ್ಲ, ಸೂಕ್ತ ತನಿಖೆ ನಡೆಯಲಿ: ನಟ ಮಮ್ಮುಟ್ಟಿ - MAMMOOTTY ON HEMA COMMITTEE - MAMMOOTTY ON HEMA COMMITTEE

ಮಲಯಾಳಂ ಸಿನಿಮಾ ರಂಗದಲ್ಲಿ ಕಿಡಿ ಹೊತ್ತಿಸಿರುವ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಹಿರಿಯ ಖ್ಯಾತ ನಟ ಮಮ್ಮುಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮಮ್ಮುಟ್ಟಿ
ಮಮ್ಮುಟ್ಟಿ (ETV Bharat)

By ETV Bharat Karnataka Team

Published : Sep 1, 2024, 4:06 PM IST

ಹೈದರಾಬಾದ್:ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಉಂಟು ಮಾಡಿರುವ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಖ್ಯಾತ ನಟ ಮಮ್ಮುಟ್ಟಿ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗದ ಪ್ರಭಾವಿಗಳಿಂದ ಅನ್ಯಾಯಕ್ಕೊಳಗಾಗಿದ್ದಾಗಿ ಹಲವು ನಟಿಯರು ಧ್ವನಿಯೆತ್ತಿದ್ದರೂ, ಈ ಬಗ್ಗೆ ಮಾಲಿವುಡ್​​ ಸ್ಟಾರ್​​ ಯಾವುದೇ ಹೇಳಿಕೆ ನೀಡಿರಲಿಲ್ಲ.

ಪ್ರಕರಣದ ಬಗ್ಗೆ ಭಾನುವಾರ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಅವರು, ಮಲಯಾಳಂ ಸಿನಿಮಾ ರಂಗದಲ್ಲಿ ಯಾವುದೇ 'ಪವರ್​​ಹೌಸ್​' ಇಲ್ಲ. ಚಿತ್ರೋದ್ಯಮದಲ್ಲಿ ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಯಬೇಕಿದೆ ಎಂದ ಅವರು, ನ್ಯಾಯಮೂರ್ತಿ ಹೇಮಾ ಅವರ ಸಮಿತಿ ನೀಡಿರುವ ಶಿಫಾರಸುಗಳನ್ನು ಸ್ವಾಗತಿಸಿದರು.

ಮಲಯಾಳಂ ಸಿನಿಮಾ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷರಾಗಿದ್ದ ಮೋಹನ್​​ಲಾಲ್​ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶನಿವಾರ ಪ್ರಕರಣದ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿದ್ದರು. ಇದರ ಬೆನ್ನಲ್ಲೇ, ಮಮ್ಮುಟ್ಟಿ ಅವರು ಹೇಳಿಕೆ ನೀಡಿದ್ದು ಮಹತ್ವ ಪಡೆದುಕೊಂಡಿದೆ.

ಮಲಯಾಳಂ ಸಿನಿಮಾ ರಂಗದಲ್ಲಿ ಯಾವುದೇ ಪ್ರಾಬಲ್ಯ ಇಲ್ಲ ಎಂಬುದನ್ನು ನಿರಾಕರಿಸಿದ ಮಮ್ಮುಟ್ಟಿ ಅವರು, ಚಿತ್ರೋದ್ಯಮದ ಮೇಲೆ ಕೇಳಿಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ, ನಟಿಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯಗಳ ಬಗ್ಗೆ ನ್ಯಾಯಮೂರ್ತಿ ಹೇಮಾ ಅವರ ಸಮಿತಿಯ ಮಾಡಿದ ಶಿಫಾರಸುಗಳನ್ನು ಒಪ್ಪಿಕೊಂಡಿದ್ದಾರೆ.

ಜೊತೆಗೆ, ಆರೋಪಗಳ ಕುರಿತು ನಡೆಯುತ್ತಿರುವ ಪೊಲೀಸ್ ತನಿಖೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಟಿಯರ ಮೇಲೆ ದೌರ್ಜನ್ಯ ನಡೆದಿದ್ದರೆ, ಈ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಮಾಜದ ಪ್ರತಿಬಿಂಬವಾಗಿರುವ ಸಿನಿಮಾದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳ ಬಗ್ಗೆ ಪರಿಶೀಲನೆಯಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಏನಿದು ಆರೋಪ:ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ಸಿಗಬೇಕಾದಲ್ಲಿ ಎಲ್ಲ ರೀತಿಯಲ್ಲಿ 'ಹೊಂದಾಣಿಕೆ' ಮಾಡಿಕೊಳ್ಳಬೇಕಿದೆ ಎಂದು ಹಲವು ನಟಿಯರು ಆರೋಪಿಸಿದ್ದಾರೆ. ಖ್ಯಾತ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಮೇಲೆ ಈ ದೂರು ಕೇಳಿಬಂದಿದೆ. ಮಲಯಾಳಂ ಸಿನಿಮಾ ರಂಗವನ್ನು 10 ರಿಂದ 15 ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ನಿಯಂತ್ರಿಸುತ್ತಿದ್ದಾರೆ. ಅವರ ಆಣತಿಯಂತೆ ಸಿನಿಮಾ ರಂಗ ನಡೆಯುತ್ತದೆ ಎಂದು ದೂರಲಾಗಿದೆ.

ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ನ್ಯಾಯಮೂರ್ತಿ ಹೇಮಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯ ವರದಿಯಲ್ಲಿ ಕೆಲ ಆಘಾತಕಾರಿ ಅಂಶಗಳು ಸೋರಿಕೆಯಾಗಿದ್ದವು. ಬಳಿಕ ಸರ್ಕಾರವೇ ಸಾಕ್ಷಿಗಳು, ನಟಿಯರ ಹೇಳಿಕೆಗಳುಳ್ಳ 235 ಪುಟಗಳ ವರದಿಯನ್ನು ಬಿಡುಗಡೆ ಮಾಡಿದೆ.

ಇದರ ಬಳಿಕ ಹಲವಾರು ಮಹಿಳಾ ಕಲಾವಿದರು ತಾವು ಎದುರಿಸಿದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಆರೋಪ ಹೊತ್ತಿರುವ ನಿರ್ದೇಶಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದ ರಂಜಿತ್, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಟ ಸಿದ್ದಿಕ್ ರಾಜೀನಾಮೆ ಸಲ್ಲಿಸಿದ್ದರು. ಜೊತೆಗೆ ಮಲಯಾಳಂ ಚಲನಚಿತ್ರ ನಟರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೋಹನ್​ಲಾಲ್​ ಅವರು ಕೂಡ ರಾಜೀನಾಮೆ ಕೊಟ್ಟಿದ್ದಾರೆ.

ಇದನ್ನೂ ಓದಿ:ನಟಿಯರ ಮೇಲೆ ದೌರ್ಜನ್ಯ ಕೇಸ್​: 'ಅಮ್ಮ' ಸಂಘಕ್ಕೆ ರಾಜೀನಾಮೆ ಬಳಿಕ ಮೋಹನ್​ಲಾಲ್​ ಮೊದಲ ಪ್ರತಿಕ್ರಿಯೆ - Mohanlal on harassment case

ABOUT THE AUTHOR

...view details