ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಾರಥ್ಯದ ಮುಂದಿನ ಬಿಗ್ - ಬಜೆಟ್ ಪ್ಯಾನ್ - ಇಂಡಿಯಾ ಸಿನಿಮಾ 'ಎನ್‌ಟಿಆರ್ ನೀಲ್' ('ಡ್ರ್ಯಾಗನ್'). ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಮೂಲಕ ಮಲಯಾಳಂ ನಟ ಟೊವಿನೋ ಥಾಮಸ್ ತೆಲುಗು ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸಿನಿಮಾ ತನ್ನ ನಿರ್ದೇಶಕ, ತಾರಾಬಳಗದ ಸಲುವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
ಇನ್‌ಸ್ಟಾಗ್ರಾಮ್‌ನಲ್ಲೊಂದು ಪೋಸ್ಟ್ ಶೇರ್:ಬುಧವಾರ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ. ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ನಟ ಟೊವಿನೋ ಥಾಮಸ್ ಇರುವ ಫೋಟೋವನ್ನು ಹಂಚಿಕೊಂಡಿದ್ದು, ನಿರ್ದೇಶಕ-ನಟನ ಮೊದಲ ಕೊಲಾಬರೇಶನ್ನನ್ನು ದೃಢಪಡಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಜೂನಿಯರ್ ಎನ್‌ಟಿಆರ್ ಈಗಾಗಲೇ ಮಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಇತರ ಪಾತ್ರವರ್ಗ ಕೂಡಾ ಚಿತ್ರತಂಡ ಸೇರುವ ವದಂತಿಗಳಿವೆ.
ನಟಿ ರುಕ್ಮಿಣಿ ವಸಂತ್ ಕೂಡಾ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಬಹುಬೇಡಿಕೆ ನಟಿ ಪ್ರಶಾಂತ್ ನೀಲ್ ಬರೆದ ಆ್ಯಕ್ಷನ್ ಥ್ರಿಲ್ಲರ್ 'ಬಘೀರ'ದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇನ್ನೂ, ಅನುಭವಿ ನಟ ಬಿಜು ಮೆನನ್ ಸಹ ಸುಮಾರು ಎರಡು ದಶಕಗಳ ನಂತರ ತೆಲುಗು ಚಿತ್ರರಂಗಕ್ಕೆ ಮರಳಿದ್ದಾರೆ. ಅವರು ಕೊನೆಯ ಬಾರಿಗೆ 2006ರಲ್ಲಿ ಬಿಡುಗಡೆಯಾದ ರಣಮ್ ಮತ್ತು ಖತರ್ನಾಕ್ ಚಿತ್ರಗಳಲ್ಲಿ ಕಾಣಿಸಿಕೊಂಡರು.