ಹೈದರಾಬಾದ್: ಮಹದೇವ್ ಬೆಟ್ಟಿಂಗ್ ಆ್ಯಪ್‌ನ ಫೇರ್‌ಪ್ಲೇ ಆ್ಯಪ್‌ನಲ್ಲಿ 2023ರ ಐಪಿಎಲ್ ಟೂರ್ನಿಯ ಪಂದ್ಯಗಳ ಕಾನೂನುಬಾಹಿರ ಸ್ಟ್ರೀಮಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಮಹಾರಾಷ್ಟ್ರ ಸೈಬರ್ ಘಟಕ ಸಮನ್ಸ್ ಜಾರಿ ಮಾಡಿದೆ. ಏಪ್ರಿಲ್ 29ರಂದು ಸೈಬರ್ ವಿಭಾಗದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.
ಫೇರ್‌ಪ್ಲೇ ಆ್ಯಪ್ ಪ್ರಕರಣದಲ್ಲಿ ಹಿರಿಯ ನಟ ಸಂಜಯ್ ದತ್, ತಮನ್ನಾ ಸೇರಿದಂತೆ ಇತರರ ಹೆಸರುಗಳು ಕೇಳಿಬಂದಿದೆ ಎಂದು ವರದಿಯಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ತಮನ್ನಾ ಅವರಿಂದ ಸ್ಪಷ್ಟನೆ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದೇ ವಾರದ ಆರಂಭದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟಿಗೆ ಸಮನ್ಸ್ ನೀಡಲಾಗಿತ್ತು. ಆದರೆ, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮತ್ತೊಂದು ದಿನವನ್ನು ತಮನ್ನಾ ಕೋರಿದ್ದರು ಎಂದು ತಿಳಿದು ಬಂದಿದೆ.
''ತಮನ್ನಾ ಅವರಿಗೆ ತಮ್ಮ ಹೇಳಿಕೆಯನ್ನು ದಾಖಲಿಸಲು ಈ ಹಿಂದೆ ದಿನಾಂಕ ಮತ್ತು ಸಮಯವನ್ನು ನೀಡಲಾಗಿತ್ತು. ಆದರೆ, ಅವರು ಆ ದಿನಾಂಕದಂದು ಭಾರತದಲ್ಲಿ ಇರಲಿಲ್ಲ. ಈಗ ಏಪ್ರಿಲ್ 29ರಂದು ಮಹಾರಾಷ್ಟ್ರ ಸೈಬರ್ ಸೆಲ್ ಮುಂದೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ'' ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ: 2023ರಲ್ಲಿ ಕೆಲವು ಐಪಿಎಲ್ ಪಂದ್ಯಗಳನ್ನು ಆ್ಯಪ್‌ನಲ್ಲಿ ಕಾನೂನುಬಾಹಿರವಾಗಿ ಸ್ಟ್ರೀಮಿಂಗ್ ಮಾಡಲಾಗಿದೆ ಎಂದು ಆರೋಪಿಸಿ ಪ್ರಸಾರಕರು ಮೊಕದ್ದಮೆ ಹೂಡಿದ್ದಾರೆ. ಅದೇ ವರ್ಷ ಸೆಪ್ಟೆಂಬರ್ನಿಂದ ಪ್ರಕರಣದ ವಿಚಾರಣೆ ಆರಂಭವಾಗಿದೆ. ಡಿಸೆಂಬರ್ನಲ್ಲಿ ಫೇರ್ ಪ್ಲೇ ಆ್ಯಪ್‌ನ ಉದ್ಯೋಗಿಯೊಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಚಿತ್ರರಂಗದ ಗಣ್ಯರು ಹೆಸರು ಮತ್ತು ಮಹತ್ವದ ಮಾಹಿತಿ ಬಹಿರಂಗವಾಗಿತ್ತು.
₹100 ಕೋಟಿ ನಷ್ಟ ಆರೋಪ: ಐಪಿಎಲ್ ಪಂದ್ಯಗಳನ್ನು ಸ್ಟ್ರೀಮ್ ಮಾಡಲು ನೆಟ್‌ವರ್ಕ್ ವಿಶೇಷ ಹಕ್ಕುಗಳನ್ನು ಪಡೆದುಕೊಂಡಿದ್ದರೂ, ಆ್ಯಪ್‌ನಲ್ಲಿ ಅವುಗಳನ್ನು ಅನಧಿಕೃತವಾಗಿ ಸ್ಟ್ರೀಮ್ ಮಾಡಲಾಗಿದೆ. ಇದರ ಪರಿಣಾಮವಾಗಿ 100 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ ಎಂದು ಪ್ರಸಾರಕ ಕಂಪನಿ ಹೇಳಿಕೊಂಡಿದೆ.
ಪ್ರಮುಖ ಹೆಸರುಗಳು ತಳುಕು: ಈ ಕುರಿತು ದಾಖಲಾದ ಎಫ್‌ಐಆರ್ ಪ್ರಕಾರ, ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್, ತಮನ್ನಾ ಭಾಟಿಯಾ ಮತ್ತು ನಟ ಸಂಜಯ್ ದತ್, ಗಾಯಕ ಬಾದ್‌ಶಾ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳಿಗೆ ವಿಚಾರಣೆಗಾಗಿ ಸಮನ್ಸ್ ನೀಡಲಾಗುತ್ತಿದೆ. ಈಗಾಗಲೇ ಬಾದ್‌ಶಾ, ಸಂಜಯ್ ದತ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರ ಮ್ಯಾನೇಜರ್‌ಗಳಿಂದ ಸಾಕ್ಷ್ಯವನ್ನು ಮಹಾರಾಷ್ಟ್ರ ಸೈಬರ್ ಸೆಲ್ ಸಂಗ್ರಹಿಸಿದೆ.
ಇದನ್ನೂ ಓದಿ:ಸಲ್ಮಾನ್ ಮನೆ ಮೇಲಿನ ದಾಳಿ ಪ್ರಕರಣ: ಶೂಟರ್ನ ಆಪ್ತರು ಪೊಲೀಸ್ ವಶಕ್ಕೆ