ಕೆಲ ಸಿನಿಮಾಗಳು ಕಂಟೆಂಟ್, ನಿರೂಪಣಾ ಶೈಲಿಯಿಂದ ಜನಮನದಲ್ಲಿ ಉಳಿದು ಬಿಡುತ್ತದೆ. ತೆರೆಕಂಡು ವರ್ಷಗಳುರುಳಿದರೂ ಕೂಡ ಯಶಸ್ವಿ ಚಿತ್ರವೆಂದು ಸದಾ ಪ್ರೆಕ್ಷಕರ ಚೆರ್ಚೆಯ ವಿಷಯವಾಗಿರುತ್ತದೆ. ಆ ಸಾಲಿನಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಕೂಡ ಒಂದು. ಕಳೆದ ವರ್ಷ ತೆರೆಕಂಡು ಸೂಪರ್ ಹಿಟ್ ಆಗಿದ್ದ 'ಕೌಸಲ್ಯಾ ಸುಪ್ರಜಾ ರಾಮ' ಇಂದಿಗೆ ಒಂದು ವರ್ಷದ ಸಂಭ್ರಮದಲ್ಲಿದೆ.
2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ 'ಕೌಸಲ್ಯಾ ಸುಪ್ರಜಾ ರಾಮ' ಜುಲೈ 28ರಂದು ತೆರೆಗಪ್ಪಳಿಸಿತ್ತು. ಶಶಾಂಕ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಉಳಿದಂತೆ ಮಿಲನಾ ನಾಗರಾಜ್, ಬೃಂದಾ ಆಚಾರ್ಯ, ನಾಗಭೂಷಣ್, ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್ ಕುಮಾರ್, ಗಿರಿರಾಜ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಸಿನಿಮಾ ನಿರೀಕ್ಷೆಯಂತೆ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ಸು ಕಂಡಿತ್ತು.
'ಲವ್ ಮಾಕ್ಟೇಲ್' ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಡಾರ್ಲಿಂಗ್ ಕೃಷ್ಣ ಅವರು ಮೊಗ್ಗಿನ ಮನಸ್ಸು, ಮುಂಗಾರು ಮಳೆ 2, ಬಚ್ಚನ್ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಶಶಾಂಕ್ ಕಾಂಬಿನೇಶನ್ನಲ್ಲಿ ಬಂದ ಚಿತ್ರ ತನ್ನ ಕಥೆಯ ಸಲುವಾಗಿಯೇ ಹೆಚ್ಚಾಗಿ ಸದ್ದು ಮಾಡಿತ್ತು. ಸರಿಸುಮಾರು 50 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡ ಈ ಚಿತ್ರ ನಂತರ ಓಟಿಟಿಗೆ ಎಂಟ್ರಿ ಕೊಟ್ಟಿತು. ಸದ್ಯ ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಿದೆ.