ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಕೊನೆಯದಾಗಿ 2022ರಲ್ಲಿ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಪಾರ ನಿರೀಕ್ಷೆಗಳೊಂದಿಗೆ ಬಿಡುಗಡೆಯಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತ್ತು. ಚಿತ್ರದ ಸಹ ನಿರ್ಮಾಪಕಿ ಹಾಗು ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಬಹುನಿರೀಕ್ಷಿತ ಪ್ರಾಜೆಕ್ಟ್ಗಳಲ್ಲಿ ಒಂದಾಗಿದ್ದರೂ ಕೂಡ ಸಿನಿಮಾ ನಿರೀಕ್ಷೆಗಳನ್ನು ತಲುಪದೇ ಇದ್ದುದು ಅಮೀರ್ ಮೇಲೆ ಪ್ರಭಾವ ಬೀರಿತು ಎಂಬುದನ್ನು ಬಹಿರಂಗಪಡಿಸಿದರು.
ಇತ್ತೀಚಿನ ಸಂದರ್ಶನವೊಂದರಲ್ಲಿ ಕಿರಣ್ ರಾವ್, ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮುಖ್ಯಭೂಮಿಕೆಯ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಹಿನ್ನಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ನಿಮ್ಮ ಸರ್ವ ಪ್ರಯತ್ನಗಳ ಹೊರತಾಗಿಯೂ ಆ ಕೆಲಸ ಯಶಸ್ವಿಯಾಗದೇ ಇರುವುದು ನಿಜವಾಗಿಯೂ ನಿರಾಶಾದಾಯಕ. ಲಾಲ್ ಸಿಂಗ್ ಚಡ್ಡಾದೊಂದಿಗೂ ಹೀಗೇ ಆಯಿತು. ಅಮೀರ್ ಮೇಲೆ ಇದು ಭಾರೀ ಪರಿಣಾಮ ಬೀರಿತು. ಚಿತ್ರದ ಹಿನ್ನಡೆ ಕೇವಲ ಅಮೀರ್ ಖಾನ್ಗೆ ಮಾತ್ರವಲ್ಲದೇ ಸಂಪೂರ್ಣ ಸಿಬ್ಬಂದಿ ಮೇಲೂ ಪರಿಣಾಮ ಬೀರಿದೆ" ಎಂಬುದನ್ನು ಅವರು ಬಹಿರಂಗಪಡಿಸಿದರು.
ಲಾಲ್ ಸಿಂಗ್ ಚಡ್ಡಾ ಅಮೀರ್ ಅವರ "ಕನಸಿನ ಯೋಜನೆ"ಯಾಗಿತ್ತು. ಪ್ರತಿಫಲವಾಗಿ ಕಳಪೆ ಪ್ರತಿಕ್ರಿಯೆ ಸಿಕ್ಕಿದ್ದು ಮಾತ್ರ ಅತ್ಯಂತ ಅಸಮಾಧಾನ ಮೂಡಿಸಿತ್ತು. ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಸಕಾರಾತ್ಮಕ ಸ್ಪಂದನೆಯ ಹೊರತಾಗಿಯೂ, ಸಿನಿಮಾ ಜನರನ್ನು ಸೆಳೆಯುವಲ್ಲಿ ವಿಫಲವಾಯಿತು ಎಂಬುದನ್ನು ಕಿರಣ್ ಒಪ್ಪಿಕೊಂಡರು. ಚಿತ್ರತಂಡ ಈ ಸತ್ಯವನ್ನು ಎದುರಿಸಲೇಬೇಕಾಯಿತು ಎಂದು ಕೂಡ ತಿಳಿಸಿದ್ದಾರೆ.