ಬೆಂಗಳೂರು: ನಿಮ್ಮ ಪ್ರಶ್ನೆ ಏನು. ನಾನು ನಟ ದರ್ಶನ್ ಅವರನ್ನು ಹೊರಗೆ ಕರೆಸಬೇಕು ಎಂದೋ ಅಥವಾ ನಾನು ಒಳಗೆ ಹೋಗಬೇಕಂತಾನೋ? ಎಂದು ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾಧ್ಯಮದವರಿಗೆ ಪ್ರಶ್ನೆ ಹಾಕಿದರು.
ನಟ ಸುದೀಪ್ ಸೆಪ್ಟೆಂಬರ್ 2 ರಂದು 51ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ವರ್ಷದ ಹುಟ್ಟುಹಬ್ಬದ ಆಚರಣೆ ಬಗ್ಗೆ ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡರು. ಈ ವೇಳೆ ತಮ್ಮ ಮುಂದಿನ ಸಿನಿಮಾಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಬಗ್ಗೆಯೂ ಮಾತನಾಡಿದ್ದಾರೆ.
''ನಾನು ಯಾರ ಮನಸ್ಸನ್ನೂ ನೋಯಿಸಲು ಇಷ್ಟಪಡೋದಿಲ್ಲ. ಅವರಿಗೆ ಫ್ಯಾನ್ಸ್ ಹಾಗೂ ಕುಟುಂಬವಿದೆ. ನಾವು ಮಾತನಾಡಿ ಅವರಿಗೆ ನೋವಾಗುವುದು ಬೇಡ. ನಮ್ಮ ದೇಶದಲ್ಲಿ ಕಾನೂನು, ಸರ್ಕಾರ ಇದೆ. ಅದರ ಮೇಲೆ ನನಗೆ ನಂಬಿಕೆ ಇದೆ. ಮಾಧ್ಯಮ ನೋಡಿ ನಮಗೂ ಎಲ್ಲಾ ಗೊತ್ತಾಗುತ್ತಿದೆ'' ಎಂದು ತಿಳಿಸಿದರು.
ಸುದೀಪ್ ಹಾಗೂ ದರ್ಶನ್ ಆತ್ಮೀಯ ಗೆಳೆಯರು. ಆದ್ರೆ ಏಕಾಏಕಿ ದೂರವಾಗಿದ್ದಾರೆ ಎಂಬ ಮಾತುಗಳಿವೆ. ಈ ಮಧ್ಯೆ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಬೇಕಂದೆನಿಸಿತಾ ಎನ್ನುವ ಪ್ರಶ್ನೆ ಸುದೀಪ್ ಅವರಿಗೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ನಟ, ''ನಾವಿಬ್ಬರು ಒಟ್ಟಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೆ ಖಂಡಿತ ಹೋಗಿ ಭೇಟಿ ಮಾಡಿ ಮಾಡುತ್ತಿದ್ದೆ. ಆದರೆ ನಾವಿಬ್ಬರು ಮಾತನಾಡುತ್ತಿಲ್ಲ. ಕೆಲವೊಮ್ಮೆ ಅಂತರ ಏಕೆ ಕಾಯ್ದುಕೊಳ್ಳುತ್ತೇವಂದ್ರೆ. ನಾವು ಸರಿ, ಅವರು ಸರಿಯಿಲ್ಲ ಅಂತೇನಲ್ಲ. ನಾವಿಬ್ಬರು ಒಟ್ಟಿಗೆ ಸರಿಯಿಲ್ಲ ಅಂತಾ. ಸೂರ್ಯ ಹಗಲು, ಚಂದ್ರ ರಾತ್ರಿ ಬರಬೇಕು. ಆಗಲೇ ಚೆಂದ. ಎರಡೂ ಒಟ್ಟಿಗೆ ಬಂದರೆ ಸಮಸ್ಯೆ ಆಗುತ್ತದೆ" ಎಂದು ತಿಳಿಸಿದರು.
ನಮ್ ಬಾಸ್ ಜೈಲಿಲ್ಲಿದ್ದಾರೆ. ಬೇರೆ ನಟರ ಸಿನಿಮಾ ನೋಡಲ್ಲ ಎಂದಿದ್ದ ಫ್ಯಾನ್ಸ್ಗೆ ಕಿಚ್ಚ ಚಾಟಿ ಬೀಸಿದ್ದಾರೆ. ಚಿತ್ರಮಂದಿರಗಳಿಗೆ ಬರೋದಿಲ್ಲ, ಸಿನಿಮಾ ನೋಡೋಲ್ಲ ಅನ್ನೋವಾಗ್ಲೆ ಗತ್ತು ಗಾಂಭಿರ್ಯದಿಂದ ನುಗ್ಗಲಿಲ್ವಾ ಎರಡು ಸಿನಿಮಾಗಳು?. ಯಾರೂ ಬರೋಲ್ಲ, ಬರೋಲ್ಲ ಅಂತಾ ಹೇಳ್ತಿದ್ರಲ್ವಾ, ಈಗೇನ್ ಹೇಳ್ತೀರಾ?. ಗಣೇಶ್, ದುನಿಯಾ ವಿಜಯ್ ಸಿನಿಮಾಗಳು ಸಕ್ಸಸ್ ಆಯ್ತಲ್ವೇ ಎಂದು ತಿಳಿಸಿದ್ದಾರೆ.
ಸುದೀಪ್ ಜೊತೆ ಸ್ನೇಹ ಇದ್ದಿದ್ರೆ ದರ್ಶನ್ ಗೆ ಈ ಸ್ಥಿತಿ ಬರ್ತಿರಲಿಲ್ಲ ಅನ್ನೋ ಮಾತಿದೆ? ಎಂಬ ಪ್ರಶ್ನೆಯೂ ಪ್ರತಿಕ್ರಿಯಿಸಿದ ಕಿಚ್ಚ.. ನೋ.. ಅದು ತಪ್ಪು.. ನಾನಿದ್ರೆ ಅನ್ನೋದು ದೊಡ್ಡ ಅಹಂ. ನಾನು ಅಷ್ಟು ದೊಡ್ಡವನಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಚಿತ್ರದುರ್ಗದ ವೀರ ಮದಕರಿಯಾಕ್ತಾರಾ ಸುದೀಪ್ ಎಂಬ ಪ್ರಶ್ನೆಗೂ ಅವರು ಉತ್ತರ ಕೊಟ್ಟಿದ್ದಾರೆ. ನಾನು ಯಾವತ್ತಿದ್ರೂ ಮದಕರಿನೇ. ಈ ಮಾತು ಹೇಳಿದ ತಕ್ಷಣ ಮತ್ತೆ ಜಾತಿ ಬಣ್ಣ ಕಟ್ಟುತ್ತಾರೆ. ನಾನು ಸಿನಿಮಾ ಜಾತಿಯವನು ಅಷ್ಟೇ. ರಾಕ್ ಲೈನ್ ಅವ್ರು ಮದಕರಿ ಸಿನಿಮಾ ಮಾಡ್ತೀನಿ ಅಂದ್ರು ಬಿಟ್ಟುಕೊಟ್ಟೆ. ಈಗ ಅವರು ಅದನ್ನ ಮಾಡ್ತಿಲ್ಲವಂತೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಹೋಗಲ್ಲ ಎಂದರು.