ತ್ರಿಶೂರ್(ಕೇರಳ): ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಸುಪ್ರಸಿದ್ಧ ಹಿರಿಯ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ (80) ಗುರುವಾರ ಸಂಜೆ ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. 'ಭಾವ ಗಾಯಕ'ರೆಂದೇ ಖ್ಯಾತಿ ಪಡೆದಿದ್ದ ಇವರು ಪ್ರೀತಿ, ಭಕ್ತಿಯ ಭಾವನೆಗಳನ್ನು ತುಂಬಿ ಅತ್ಯಂತ ಸೊಗಸಾಗಿ ಹಾಡುತ್ತಿದ್ದರು.
ಗುರುವಾರ ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ಜಯಚಂದ್ರನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ. ಸಂಜೆ ಸುಮಾರು 7.55ಕ್ಕೆ ನಿಧನ ಹೊಂದಿದರು ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಮೃತರು ಪತ್ನಿ ಲಲಿತಾ, ಮಗಳು ಲಕ್ಷ್ಮೀ ಮತ್ತು ಮಗ ಗಾಯಕ ದೀನನಾಥನ್ ಅವರನ್ನು ಅಗಲಿದ್ದಾರೆ.
16,000ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದ ಜಯಚಂದ್ರನ್: ಜಯಚಂದ್ರನ್ ಅವರು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ 16,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು. ಈ ಮೂಲಕ ಭಾರತೀಯ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕನನ್ನು ಸಾಕಷ್ಟು ಪ್ರಶಸ್ತಿ, ಗೌರವಗಳು ಅರಸಿಕೊಂಡು ಬಂದಿವೆ. ರಾಷ್ಟ್ರೀಯ ಫಿಲ್ಮ್ ಪ್ರಶಸ್ತಿಗಳು ಹಾಗು ಕೇರಳ ಸರ್ಕಾರ ಪ್ರತಿಷ್ಟಿತ ಜೆ.ಸಿ.ಜೇನಿಯಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೇ, 5 ಬಾರಿ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿ ಪಡೆದಿದ್ದಾರೆ. 2 ಬಾರಿ ತಮಿಳುನಾಡು ರಾಜ್ಯ ಸಿನಿಮಾ ಪ್ರಶಸ್ತಿ ದೊರೆತಿದೆ. ಶ್ರೀ ನಾರಾಯಣ ಗುರು ಸಿನಿಮಾದಲ್ಲಿನ 'ಶಿವ ಶಂಕರ ಶರಣ ಸರ್ವ ವಿಭೋ' ಪ್ರದರ್ಶನಕ್ಕಾಗಿ ಇವರಿಗೆ ರಾಷ್ಟ್ರೀಯ ಪ್ರಶಸ್ತಿ ಸಂದಿತ್ತು.
ಪಿ.ಜಯಚಂದ್ರನ್ ಹಾಡಿರುವ ಕನ್ನಡ ಸೂಪರ್ ಹಿಟ್ ಗೀತೆಗಳು:
- ಹಿಂದೂಸ್ಥಾನವು ಎಂದೂ ಮರೆಯದ (ಅಮೃತ ಘಳಿಗೆ ಸಿನಿಮಾ)
- ಮಂದಾರ ಪುಷ್ಪವು ನೀನು (ರಂಗನಾಯಕಿ)
- ಕನ್ನಡ ನಾಡಿನ ಕರಾವಳಿ (ಮಸಣದ ಹೂವು)
- ಕಾಲ್ಗೆಜ್ಜೆ ತಾಳಕ್ಕೆ (ಮುನಿಯನ ಮಾದರಿ)
- ಚಂದ ಚಂದ (ಮಾನಸ ಸರೋವರ)
- ಪ್ರೇಮದ ಶ್ರುತಿ ಮೀಟಿದೆ (ಗಣೇಶನ ಮದುವೆ)
- ಜೀವನ ಸಂಜೀವನ (ಹಂತಕನ ಸಂಚು)
ಇರಿಂಜಲಕುಡದ ಕ್ರೈಸ್ಟ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ಇವರು ಚೆನ್ನೈನ ಖಾಸಗಿ ಉದ್ದಿಮೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಚೆನ್ನೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಜಯಚಂದ್ರನ್ ಅವರ ಪ್ರತಿಭೆ ಗುರುತಿಸಿದ ಸಿನಿಮಾ ನಿರ್ಮಾಪಕರಾದ ಸೋಭನಾ ಪರಮೇಶ್ವರನ್ ನಾಯರ್ ಮತ್ತು ನಿರ್ದೇಶಕ ಎ.ವಿನ್ಸೆಂಟ್ ಅವರು ಜಯಚಂದ್ರನ್ ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದ್ದರು. 1965ರಲ್ಲಿ ತೆರೆಗೆ ಬಂದ 'ಕುಂಜಲಿ ಮರಕ್ಕರ್' ಸಿನಿಮಾದಲ್ಲಿ ಪ್ರಸಿದ್ಧ ಸಾಹಿತಿ ಪಿ. ಭಾಸ್ಕರನ್ ವಿರಚಿತ 'ಒರು ಮುಲ್ಲಪ್ಪೋ ಮಲಯುಮಯಿ' ಎಂಬ ಹಾಡು ಹಾಡಿದ್ದರು. ಈ ಮೂಲಕ ಸಿನಿಮಾ ಕ್ಷೇತ್ರಕ್ಕೆ ಅಧಿಕೃತವಾಗಿ ಇವರ ಪದಾರ್ಪಣೆಯಾಯಿತು. ಆದರೆ, 'ಕಲಿತೋಜನ್' ಸಿನಿಮಾದ ಸಿನಿಮಾದ ಮಂಜಲಿಯಿಲ್ ಮುಂಗಿತೋರ್ತಿ ಇವರ ಮೊದಲು ಬಿಡುಗಡೆಯಾದ ಸಿನಿಮಾ ಹಾಡಾಗಿದೆ.