'ಮಹಾನಟಿ' ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಭಿನ್ನ ಸ್ಟಾರ್‌ಡಮ್ ಹೊಂದಿರುವ ನಟಿ ಕೀರ್ತಿ ಸುರೇಶ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ಥಟ್ಟಿಲ್ (Antony Thattil) ಅವರೊಂದಿಗೆ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ್ದಾರೆ.
ಸೌತ್ ಸ್ಟಾರ್ ನಟಿಯಾಗಿರುವ ಕೀರ್ತಿ ಸುರೇಶ್ ತಮ್ಮ ಬಾಲ್ಯ ಸ್ನೇಹಿತ ಆಂಟೋನಿ ಥಟ್ಟಿಲ್ ಅವರನ್ನು ಕಳೆದ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ವಿದ್ಯಾಭ್ಯಾಸದ ಸಂದರ್ಭದಲ್ಲಿ ಹುಟ್ಟಿದ ಪ್ರೇಮ್ ಕಹಾನಿ ಇದು. ಇದೀಗ ತಮ್ಮ ಪ್ರೇಮಸಂಬಂಧಕ್ಕೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಗೋವಾದಲ್ಲಿ ಹಸೆಮಣೆ ಏರಿ ತಮ್ಮ ಜೀವನದುದ್ದಕ್ಕೂ ಪರಸ್ಪರರು ಸಾಥ್ ನೀಡುವುದಾಗಿ ಪ್ರಮಾಣ ಮಾಡಿಕೊಂಡರು.
ಜನಪ್ರಿಯ ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನಡೆದಿದೆ. ಇಬ್ಬರೂ ಅತ್ಯಂತ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.
ತಾಳಿ ಕಟ್ಟುವ ಕ್ಷಣದಿಂದ ಹಿಡಿದು ವೆಡ್ಡಿಂಗ್ನ ಹಲವು ಫೋಟೋಗಳನ್ನು ಕಾಣಬಹುದು. ಪೋಸ್ಟ್ಗೆ '#ForTheLoveOfNyke' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ವಧು ಹಸಿರು, ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರೆ, ವರ ವೈಟ್ ಲುಂಗಿ ಧರಿಸಿದ್ದರು. ಹಲವು ಶಾಸ್ತ್ರಗಳು ನೆರವೇರಿದ್ದು, ಕೆಂಪು ಸೀರೆಯಲ್ಲೂ ನಟಿಯನ್ನು ಕಾಣಬಹುದು. ಹಂಚಿಕೊಂಡಿರುವ ಸರಣಿ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ. ನವ ಜೀವನಕ್ಕೆ ಶುಭ ಕೋರುತ್ತಿದ್ದಾರೆ.
ಕಳೆದ ದಿನ, ಮದುವೆ ಸಂಭ್ರಮಾಚರಣೆಯ ಪ್ರಾರಂಭದ ಬಗ್ಗೆ ಫೋಟೋ ಹಂಚಿಕೊಂಡಿದ್ದರು. ಮೇಕಪ್‌ಗೆ ರೆಡಿಯಾಗುತ್ತಿರುವ, ಮೇಕಪ್ ಗೌನ್‌ನಲ್ಲಿರುವ ಫೋಟೋ ಅದಾಗಿತ್ತು. ಇದೀಗ ವಿವಾಹ ಸಮಾರಂಭದ ಫೋಟೋಗಳು ಹೊರಬಿದ್ದಿವೆ.