ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ಆಂಟೋನಿ ಥಟ್ಟಿಲ್ (Antony Thattil) ಅವರನ್ನು ಇದೇ ಡಿಸೆಂಬರ್‌ನಲ್ಲಿ ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆಯಲಿದೆ. ಜನಪ್ರಿಯ ತಾರೆಯಿಂದ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲವಾದ್ರೂ, 14 ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಹೈಸ್ಕೂಲ್ ಸಮಯದಿಂದ ಪ್ರೀತಿಯಲ್ಲಿರುವ ಜೋಡಿ ತಮ್ಮ ಪ್ರೇಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದಾರೆ.
ವರದಿಗಳ ಪ್ರಕಾರ, ಆಂಟೋನಿ ಥಟ್ಟಿಲ್ ಕೇರಳದ ಕೊಚ್ಚಿ ಮೂಲದವರಾಗಿದ್ದು, ರಾಜ್ಯದಲ್ಲಿ ಹೆಸರಾಂತ ರೆಸಾರ್ಟ್ಗಳನ್ನು ಹೊಂದಿದ್ದಾರೆ. ಈ ಮದುವೆ ಕಾರ್ಯಕ್ರಮ ಡಿಸೆಂಬರ್ 11-12ರ ನಡುವೆ ನಡೆಯಲಿದೆ ಎಂದು ಹೇಳಲಾಗಿದೆ. ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗಲಿದ್ದಾರೆ. ನಟಿಯ ಪೋಷಕರಾದ, ಹಿರಿಯ ನಿರ್ಮಾಪಕ - ನಟ ಸುರೇಶ್ ಕುಮಾರ್ ಮತ್ತು ನಟಿ ಮೇನಕಾ ಅವರು ಈ ಬಗ್ಗೆ ಉತ್ಸಾಹದಲ್ಲಿದ್ದಾರೆ ಎಂದು ವರದಿಯಾಗಿದೆ. ಗೋವಾದಲ್ಲಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಅದ್ಧೂರಿ ಮತ್ತು ಬಹಳ ಖಾಸಗಿಯಾಗಿ ಕಾರ್ಯಕ್ರಮ ನಡೆಯಲಿದೆ.
ಈ ವರ್ಷಾರಂಭದಲ್ಲಿ ತಮ್ಮ ಮದುವೆ ಸುತ್ತಲಿನ ವದಂತಿಗಳನ್ನುದ್ದೇಶಿಸಿ ಮಾತನಾಡಿದ್ದ ನಟಿ ಕೀರ್ತಿ ಸುರೇಶ್, "ಸರಿಯಾದ ಸಮಯದಲ್ಲಿ" ಈ ಬಗ್ಗೆ ಬಹಿರಂಗಪಡಿಸುವುದಾಗಿ ತಿಳಿಸಿದ್ದರು. 2023ರಲ್ಲೂ ನಟಿಯ ಸ್ನೇಹಿತರೋರ್ವರನ್ನೇ ಉಲ್ಲೇಖಿಸಿ ಪಾರ್ಟ್ನರ್ ಇರಬಹುದೇನೋ? ಎಂದು ಊಹಿಸಲಾಗಿತ್ತು. ಆ ಸಂದರ್ಭದಲ್ಲೂ ಸೂಕ್ತ ಸಮಯಕ್ಕೆ ಬಹಿರಂಗಪಡಿಸುವುದಾಗಿ ಭರವಸೆ ನೀಡಿದ್ದರು.
2000ರ ದಶಕದ ಆರಂಭದಲ್ಲಿ ಬಾಲ್ಯದಲ್ಲೇ ತಮ್ಮ ನಟನೆ ಪ್ರಾರಂಭಿಸಿದ ಕೀರ್ತಿ, ಮಹಾನಟಿಯಂತಹ ಹಿಟ್ ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯರಾದರು. ಈ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ (ಅತ್ಯುತ್ತಮ ನಟಿ) ಮುಡಿಗೇರಿಸಿಕೊಂಡರು.