ಮೈಸೂರು : ಯಾವುದು ಸತ್ಯ ಹಾಗೂ ಅಸತ್ಯ ಎಂಬುದನ್ನ ತಿಳಿಯಲು ಒಂದು ಇನ್ವೆಸ್ಟಿಗೇಟಿಂಗ್ ಏಜೆನ್ಸಿ ಕೆಲಸ ಮಾಡುತ್ತಿದೆ. ಅದಕ್ಕೆ ಬೇಕಾದ ಪೂರಕ ಮಾಹಿತಿ ನಾವು ಕೊಡುತ್ತಾ ಇದ್ದೇವೆ ಎಂದು ಮುಡಾ ಮಾಜಿ ಆಯುಕ್ತ ಡಿ. ಬಿ ನಟೇಶ್ ಹೇಳಿದ್ದಾರೆ.
ಮೈಸೂರು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಈ ವೇಳೆ, 14 ನಿವೇಶನಗಳನ್ನ ಯಾವ ಆಧಾರದ ಮೇಲೆ ಕೊಟ್ಟಿದ್ದೀರಿ ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ನಾನು ಆ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮುಂದೆ ಏನನ್ನೂ ಹೇಳಲಾಗುವುದಿಲ್ಲ, ತನಿಖೆ ಮುಗಿಯಲಿ, ನಂತರ ಸತ್ಯ ಹೊರಗೆ ಬರಲಿದೆ ಎಂದರು.
ನಿವೇಶನ ಕೊಟ್ಟಿರುವ ವಿಚಾರ ಮುಡಾದ ಕಾಯ್ದೆ ವ್ಯಾಪ್ತಿಯೊಳಗೆ ಇದೆಯೋ, ಇಲ್ಲವೋ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ನಾನೊಂದು ರೂಲ್ ಹೇಳುತ್ತೇನೆ, ಇನ್ನೊಬ್ಬರು ಮತ್ತೊಂದು ರೂಲ್ ಹೇಳ್ತಾರೆ. ಈಗ ಇದು ತನಿಖೆಯಾಗಲಿ, ಅದಕ್ಕೆ ಬೇಕಾದ ಪೂರಕ ಮಾಹಿತಿ ಕೊಡೋಣ. ನಂತರ ನ್ಯಾಯಾಲಯದ ಮುಂದೆ ಬರುತ್ತೆ. ನಂತರ ಇದು ಕಾನೂನಿನ ವ್ಯಾಪ್ತಿಯಲ್ಲಿ ಇದೆಯೇ, ಇಲ್ಲವೇ ಎಂಬುದು ತಿಳಿಯುತ್ತೆ ಎಂದು ಹೇಳಿದರು.
ಮಾಜಿ ಮುಡಾ ಅಧ್ಯಕ್ಷ ಧ್ರುವಕುಮಾರ್ ಹೇಳಿದ್ದೇನು? : ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಹೆಸರಿಗೆ 14 ಸೈಟ್ ನೀಡುವಾಗ ಮುಡಾ ಅಧ್ಯಕ್ಷರಾಗಿದ್ದ ಧ್ರುವಕುಮಾರ್ ಮೈಸೂರು ಲೋಕಾಯುಕ್ತ ಕಚೇರಿಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಭೂಮಿಯಾಗಲಿ, ಸೈಟ್ ಆಗಲಿ ಕೊಡಿ ಎಂದು ಕೇಳಿರಲಿಲ್ಲ. ಅವರ ಪತ್ನಿ ಪಾರ್ವತಿ ಕೂಡ ಪತ್ರ ಬರೆದಿಲ್ಲ. ನಾವೇ ಖುದ್ದಾಗಿ ಸಿಎಂ ಅವರನ್ನು ಭೇಟಿ ಮಾಡಿ, ಭೂಮಿಗೆ ಬದಲಾಗಿ ಸೈಟ್ ತೆಗೆದುಕೊಳ್ಳಿ ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ಇವರಿಗೆ ಭೂಮಿಗೆ ಬದಲಾಗಿ ಸೈಟ್ ಕೊಡಬೇಕು ಎಂದು ನಾವು ತೀರ್ಮಾನ ಮಾಡಿದ್ದೆವು. ಆದರೆ ಬಳಿಕ ನನ್ನ ಅವಧಿ ಮುಗಿದು ಬೇರೆಯವರು ಬಂದರು ಅಂತಾ ಹೇಳಿದ್ದಾರೆ.
ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಹೇಳಿದ್ದೇನು? : ನಟೇಶ್ ಅವರನ್ನು ಲೋಕಾಯುಕ್ತರು ಬಂಧಿಸಬೇಕು. ಇಂತಹ ಅಧಿಕಾರಿಯಿಂದಲೇ ಮಲ್ಲಿಕಾರ್ಜುನ್ ಸ್ವಾಮಿ, ಪಾರ್ವತಿಗೆ ಭೂಮಿ ಮಾರಾಟವಾಗಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಮುಡಾದಲ್ಲಿ ಸಾವಿರಾರು ಕೋಟಿ ನಷ್ಟವಾಗಿದೆ. ಈ ನಟೇಶ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮುಡಾ ಮಾಜಿ ಅಧಿಕಾರಿ ನಟರಾಜ್ ಹೇಳಿದ್ದೇನು ? : ಮುಡಾ ಪ್ರಕರಣದಲ್ಲಿ ಹೋರಾಟ ಮಾಡುತ್ತಿರುವ ಮಾಜಿ ಮುಡಾ ಅಧಿಕಾರಿ ನಟರಾಜ್ ಮಾಧ್ಯಮಗಳ ಜತೆ ಮಾತನಾಡಿ, ಮುಡಾದ ಈ ಸ್ಥಿತಿಗೆ ನಟೇಶ್ ಕಾರಣ. ಇಂತಹವರನ್ನು ಸರ್ಕಾರ ಮೊದಲು ವಜಾ ಮಾಡಬೇಕು. ಲೋಕಾಯುಕ್ತ ತನಿಖೆಯಿಂದ ಕೇಸ್ ವಿಳಂಬವಾಗುತ್ತಿದ್ದು, ಮುಚ್ಚಿಹಾಕುವ ಹುನ್ನಾರ ನಡೆದಿದೆ ಎಂದು ಹರಿಹಾಯ್ದರು.
ಇದನ್ನೂ ಓದಿ : ಸಿಎಂ ಮತ್ತು ಕುಟುಂಬಸ್ಥರ ವಿರುದ್ಧ ಅಪಪ್ರಚಾರ ಆರೋಪ ಪ್ರಕರಣ: ವಿಚಾರಣೆ ಎದುರಿಸಿದ ಸ್ನೇಹಮಯಿ ಕೃಷ್ಣ