ಹೈದರಾಬಾದ್: ಆಗಸ್ಟ್ 16, ಶುಕ್ರವಾರದಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ ಘೋಷಣೆಯಾಗಿದೆ. 2022ರ ಭಾರತೀಯ ಚಿತ್ರರಂಗದಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗೌರವಿಸುವ ಕ್ಷಣವಿದು. ಈ ವರ್ಷದ ಪ್ರಶಸ್ತಿಗಳ ಪಟ್ಟಿಯಲ್ಲಿ ಕಾಂತಾರ, ಕೆಜಿಎಫ್, ಪೊನ್ನಿಯಿನ್ ಸೆಲ್ವನ್, ಆಟ್ಟಂ, ಬ್ರಹ್ಮಾಸ್ತ್ರ, ಗುಲ್ಮೊಹರ್ ಮತ್ತು ಉಂಚೈ ಸೇರಿದಂತೆ ಹಲವು ಚಿತ್ರಗಳು ಸಾಕಷ್ಟು ಸದ್ದು ಮಾಡಿವೆ. ವಿವಿಧ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಈ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಲು ಲಭ್ಯವಿವೆ.
1. ಕಾಂತಾರ (ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್)
ನಟ ರಿಷಬ್ ಶೆಟ್ಟಿ 'ಕಾಂತಾರ' ಎಂಬ ಅದ್ಭುತ ಚಿತ್ರದ ಮೂಲಕ ಡಿವೈನ್ ಸ್ಟಾರ್ ಎಂಬ ಜನಪ್ರಿಯತೆ ಸಂಪಾದಿಸಿದ್ದಲ್ಲದೇ ತಮ್ಮ ಅಸಾಧಾರಣ ಅಭಿನಯದಿಂದಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲದೇ, ಅತ್ಯುತ್ತಮ ಮನರಂಜನಾ ಸಿನಿಮಾವಾಗಿಯೂ ಕಾಂತಾರ ಹೊರಹೊಮ್ಮಿದೆ. ತನ್ನ ಮೂಲ ಭಾಷೆ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಹಿಂದಿ ಡಬ್ಬಿಂಗ್ ವರ್ಷನ್ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದು.
2. ಕೆಜಿಎಫ್ ಚಾಪ್ಟರ್ 2 (ಅಮೆಜಾನ್ ಪ್ರೈಮ್ ವಿಡಿಯೋ)
ರಾಕಿಂಗ್ ಸ್ಟಾರ್ ಮುಖ್ಯಭೂಮಿಕೆಯ ಕೆಜಿಎಫ್ 2 ಅತ್ಯುತ್ತಮ ಕನ್ನಡ ಸಿನಿಮಾ ಮತ್ತು ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್ ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 2022ರ ಏಪ್ರಿಲ್ 14ರಂದು ಬಿಡುಗಡೆ ಆದ ಈ ಸಿನಿಮಾ ಈಗಲೂ ಅದೇ ಕ್ರೇಜ್ ಉಳಿಸಿಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.
3. ಆಟ್ಟಮ್ (ಅಮೆಜಾನ್ ಪ್ರೈಮ್ ವಿಡಿಯೋ)
ಮಲಯಾಳಂ ಸಿನಿಮಾ 'ಆಟ್ಟಂ' 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಅತ್ಯುತ್ತಮ ಚಲನಚಿತ್ರವಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಚಿತ್ರಕಥೆಗೆ ಗೌರವ ಸಂದಿದೆ. ಆನಂದ್ ಎಕರ್ಶಿ ನಿರ್ದೇಶನದ ಈ ಸೂಪರ್ ಹಿಟ್ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಿ ಆನಂದಿಸಿ.
4. ಪೊನ್ನಿಯಿನ್ ಸೆಲ್ವನ್ (ಅಮೆಜಾನ್ ಪ್ರೈಮ್ ವಿಡಿಯೋ)
ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 1 ಚಿತ್ರ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ತಮಿಳಿನ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಜೊತೆಗೆ, ಎಆರ್ ರೆಹಮಾನ್ (ಅತ್ಯುತ್ತಮ ಹಿನ್ನೆಲೆ ಸಂಗೀತ), ರವಿ ವರ್ಮನ್ (ಅತ್ಯುತ್ತಮ ಛಾಯಾಗ್ರಹಣ), ಆನಂದ್ ಕೃಷ್ಣಮೂರ್ತಿ (ಅತ್ಯುತ್ತಮ ಧ್ವನಿ ವಿನ್ಯಾಸ) ಅವರಿಗೆ ವೈಯಕ್ತಿಕ ಗೌರವಗಳು ಸಂದಿವೆ. ಈ ಬ್ಲಾಕ್ಬಸ್ಟರ್ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.