ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದ 'ಕಾಂತಾರ' ನಿರೀಕ್ಷೆಗೂ ಮೀರಿ ವಿಶ್ವಾದ್ಯಂತ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿತು. ವಿಭಿನ್ನ ಕಥಾಹಂದರ, ಕಥೆ ರವಾನಿಸಿದ ರೀತಿ ಮತ್ತು ರಿಷಬ್ ಶೆಟ್ಟಿಯವರ ಅದ್ಭುತ ಅಭಿನಯ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಅದ್ಭುತ ಸಿನಿಮೀಯ ಅನುಭವ ಪ್ರೇಕ್ಷಕರಿಗೆ ಪೂರೈಸುವಲ್ಲಿ ಕಾಂತಾರ ಯಶ ಕಂಡಿತ್ತು.
ಅದ್ಭುತ ಯಶಸ್ಸಿನ ನಂತರ, ಹೊಂಬಾಳೆ ಫಿಲ್ಮ್ಸ್ 'ಕಾಂತಾರ: ಚಾಪ್ಟರ್ 1' ಅನ್ನು ಘೋಷಿಸಿತು. ಇದು ಅಭಿಮಾನಿಗಳಲ್ಲಿ ಉತ್ಸಾಹ ಸೃಷ್ಟಿಸಿತು. ಈಗಾಗಲೇ ಬಿಡುಗಡೆಗೊಂಡಿರುವ ಪೋಸ್ಟರ್ಸ್, ಗ್ಲಿಂಪ್ಸ್ ಪ್ರೇಕ್ಷಕರ ಗಮನ ಸೆಳೆದಿವೆ. ತಮ್ಮ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುವಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಪ್ರಸ್ತುತ ದೊಡ್ಡ ಯುದ್ಧ ಸನ್ನಿವೇಶವನ್ನು ಚಿತ್ರೀಕರಿಸುವತ್ತ ಚಿತ್ರತಂಡ ಗಮನ ಹರಿಸಿದೆ. ಇದರಲ್ಲಿ ಹಲವು ಅಂತಾರಾಷ್ಟ್ರೀಯ ತಂತ್ರಜ್ಞರು ಭಾಗವಹಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಕಾಂತಾರ: ಅಧ್ಯಾಯ 1ಗಾಗಿ ದೊಡ್ಡ ಪ್ರಮಾಣದ ಯುದ್ಧದ ಸನ್ನಿವೇಶವನ್ನು ಚಿತ್ರೀಕರಿಸಲು ಮುಂದಾಗಿದೆ. ಇದಕ್ಕಾಗಿ ನಿರ್ಮಾಣ ಸಂಸ್ಥೆ ದೊಡ್ಡ ತಂಡ ಮತ್ತು ಅನೇಕ ಅಂತಾರಾಷ್ಟ್ರೀಯ ಎಕ್ಸ್ಪರ್ಟ್ಸ್ ಜೊತೆ ಸೇರಿ ಕೆಲಸ ಮಾಡಿದೆ. ಈ ವಾರ್ ಸೀಕ್ವೆನ್ಸ್ ಭರ್ಜರಿಯಾಗಿ ಮೂಡಿ ಬರೋ ನಿರೀಕ್ಷೆಯಿದೆ. ಈ ಭಾಗದ ಚಿತ್ರೀಕರಣ 3 ತಿಂಗಳು ತೆಗೆದುಕೊಳ್ಳಲಿದೆ.
ಇದು ಸಿನಿಪ್ರಿಯರಿಗೆ ಸರಿಸಾಟಿಯಿಲ್ಲದ ಸಿನಿಮೀಯ ಅನುಭವ ನೀಡಲು ಚಲನಚಿತ್ರ ನಿರ್ಮಾಪಕರ ಸಮರ್ಪಣೆ ಎತ್ತಿ ತೋರಿಸುತ್ತದೆ. ಚಿತ್ರತಂಡ ತನ್ನ ಇತಿಮಿತಿಗಳನ್ನು ಮೀರಿ ಕೆಲಸ ಮಾಡುತ್ತಿದೆ.