ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿರುವ 'ಕಣ್ಣಪ್ಪ: ದಿ ಗ್ರೇಟ್ ಎಪಿಕ್ ಇಂಡಿಯನ್ ಟೇಲ್' ಸಿನಿಮಾ ಘೋಷಣೆ ಆದಾಗಿನಿಂದ ಒಂದಲ್ಲ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇದೆ. ವಿಷ್ಣು ಮಂಚು ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಬಹುತಾರಾಗಣ ಇರೋದೇ ಚಿತ್ರದ ಹೈಲೈಟ್. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ 'ಕಣ್ಣಪ್ಪ' ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮತ್ತೊಂದು ಲುಕ್ ಅನ್ನು ಹೊರತಂದಿದೆ ಚಿತ್ರತಂಡ.
ಪೋಸ್ಟರ್‌ನಲ್ಲಿ ತಮ್ಮ ಲುಕ್ ಮೂಲಕವೇ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ಮಿಂಚು ಹರಿಸಿದ್ದಾರೆ. ಬಿಲ್ಲು ಮತ್ತು ಬಾಣದೊಂದಿಗೆ ಕಣ್ಣಪ್ಪನಾಗಿ ವಿಷ್ಣು ಮಂಚು ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದಾರೆ. ಜಲಪಾತದಿಂದ ಹೊರಹೊಮ್ಮುತ್ತಾ, ಇಟ್ಟ ಗುರಿಯತ್ತ ಬಾಣ ನೆಟ್ಟಿದ್ದಾನೆ ಕಣ್ಣಪ್ಪ. ಭಕ್ತಿ ಪ್ರಧಾನದ ಜೊತೆಗೆ ಆ್ಯಕ್ಷನ್-ಪ್ಯಾಕ್ಡ್ ಸೀಕ್ವೆನ್ಸ್ ಕೂಡ ಚಿತ್ರದಲ್ಲಿ ಭರ್ಜರಿಯಾಗೇ ಇರಲಿದೆ ಎಂಬುದನ್ನು ಈ ನೋಟದಲ್ಲಿ ಸುಳಿವು ಬಿಟ್ಟುಕೊಟ್ಟಿದೆ.
24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಜಂಟಿಯಾಗಿ ಕಣ್ಣಪ್ಪ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಬಿಗ್ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್ ಬಹುತೇಕ ವಿದೇಶದಲ್ಲಿಯೇ ನಡೆಯುತ್ತಿದೆ. ನ್ಯೂಜಿಲೆಂಡ್‌ನ ಸುಂದರ ವಾತಾವರಣದಲ್ಲಿ ಈ ಚಿತ್ರದ ಎರಡನೇ ಶೆಡ್ಯೂಲ್ನ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರೀಕರಣದಲ್ಲಿ 600 ಮಂದಿ ಭಾಗವಹಿಸಿರೋದು ವಿಶೇಷ.