ಕನ್ನಡದ ಶ್ರೇಷ್ಠ ನಟರಾದ ರಾಜ್ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್, ದ್ವಾರಕೀಶ್, ನಟ-ನಿರ್ಮಾಪಕ ಎಂ.ಪಿ.ಶಂಕರ್ ಅವರಿಗೆ ನಿರ್ಮಾಪಕರಿಗಾಗಿಯೇ ಒಂದು ಕಟ್ಟಡ ಕಟ್ಟಬೇಕು ಎಂಬ ಕನಸಿತ್ತು. ಆ ಕನಸೀಗ ನನಸಾಗುವ ಹೊತ್ತು.
ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ನಿರ್ಮಾಣವಾಗಿದೆ. ಜೂನ್ 30ರಂದು (ಭಾನುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಮೇಶ್ ಬಣಕಾರ್ ಮಾತನಾಡಿ, "ಬಹಳ ಜನರ ಶ್ರಮದಿಂದ ನಿರ್ಮಾಪಕರ ಸಂಘದ ನೂತನ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು, ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಪದಾಧಿಕಾರಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು.