ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ರಂಗಭೂಮಿ ಹಿನ್ನೆಲೆಯಿಂದ ಬಂದ ಅದೆಷ್ಟೋ ಕಲಾವಿದರು ಬೆಳ್ಳಿ ತೆರೆ ಮೇಲೆ ಮಿಂಚಿ, ಯಶ ಕಂಡು ಸಿನಿ ವೃತ್ತಿಜೀವನ ಸಾಗಿಸುತ್ತಿದ್ದಾರೆ. ಅದೇ ಹಾದಿಯಲ್ಲಿ ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ಇದ್ದು, ಇದೀಗ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಜ್ಜಾಗಿದ್ದಾರೆ. 'ಧೀರ ಭಗತ್ ರಾಯ್' ಸಿನಿಮಾದ ಶೀರ್ಷಿಕೆ.
ಬಹುತೇಕ ಶೂಟಿಂಗ್ ಮುಗಿಸಿರೋ ಧೀರ ಭಗತ್ ರಾಯ್ ಚಿತ್ರತಂಡ ಪ್ರಮೋಷನ್ ಕೈಗೊಂಡಿದೆ. ಚಿತ್ರದ ನಾಯಕ ನಟ ರಾಕೇಶ್ ದಳವಾಯಿ, ನಾಯಕಿ ಸುಚರಿತಾ, ನಿರ್ದೇಶಕ ಕರ್ಣನ್ ಎಸ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ನಿರ್ಮಾಪಕ ಪ್ರವೀಣ್ ಗೌಡ ತಮ್ಮ ಚಿತ್ರದ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡರು.
ಕರ್ಣನ್ ಎಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ 'ಧೀರ ಭಗತ್ ರಾಯ್'. ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಕರ್ಣನ್, ನಮ್ಮ ಸಿನಿಮಾ ಭೂಸುಧಾರಣೆ ಹಾಗೂ ಕೆಳ ವರ್ಗದ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆ ಒಳಗೊಂಡಿದೆ. ಈಗಾಗ್ಲೇ ಕಾಟೇರ ಸಿನಿಮಾದಲ್ಲಿ ಈ ರೀತಿಯ ಕಥೆಯನ್ನು ಹೇಳಲಾಗಿದೆ. ಭೂಸುಧಾರಣೆ ಬಗ್ಗೆ ನಮ್ಮ ಸಿನಿಮಾ ಹೆಚ್ಚು ಮಾತನಾಡಲಿದೆ ಎಂದರು.
ನಾಯಕ ನಟ ರಾಕೇಶ್ ದಳವಾಯಿ ಮಾತನಾಡಿ, ನಾನು 2014ರಿಂದ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಧೀರ ಭಗತ್ ರಾಯ್ ಪಾತ್ರಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡು ಅಭಿನಯಿಸಿದ್ದೇನೆ. ಧೀರ ಭಗತ್ ರಾಯ್ - ಯಾವ ದೊಡ್ಡ ಚಿತ್ರಕ್ಕೂ ಕಮ್ಮಿಯಿಲ್ಲ. ಕಾಟೇರ ಚಿತ್ರದಂತೆ ಧೀರ ಗೆಲ್ಲುತ್ತಾನೆ. ನನಗೆ ನಮ್ಮ ಸಿನಿಮಾದ ಕಂಟೆಂಟ್ ಮೇಲೆ ನಂಬಿಕೆ ಇದೆ. ಅದಕ್ಕೆ ಪುಷ್ಪ 2 ಸಿನಿಮಾ ಎದುರು ಬಿಡುಗಡೆ ಮಾಡ್ತಾ ಇರೋದು. ಡಿಸೆಂಬರ್ ಕನ್ನಡಿಗರಿಗೆ ಲಕ್ಕಿ ತಿಂಗಳು. ಈ ಕಾರಣಕ್ಕೆ ನಮ್ಮ ಚಿತ್ರದ ಮೇಲೆ ಸಾಕಷ್ಟು ವಿಶ್ವಾಸವಿದೆ. ಯಾರಿಗೂ ಹೆದರೋ ಮಾತಿಲ್ಲ ಎಂದು ತಿಳಿಸಿದರು.