ಶಿನು ಜಾರ್ಜ್, ಹಿಂಗಂದ್ರೆ ಹೆಚ್ಚಿನವರಿಗೆ ಗೊತ್ತಾಗಲಿಕ್ಕಿಲ್ಲ. ಅದೇ ಮಿತ್ರ ಎಂದು ಕರೆದರೆ ಇಡೀ ಚಂದನವನ ಮುಗಳ್ನಗುತ್ತದೆ. ಬಹುಮುಖ ಪ್ರತಿಭೆ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 47ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ಮಿತ್ರ ಯಾವಾಗಲೂ ಸ್ನೇಹ-ಪ್ರೀತಿ, ವಿಶ್ವಾಸದ ಹತ್ರ. ಸ್ನೇಹಕ್ಕೋಸ್ಕರ, ಸ್ನೇಹಿತರಿಗೋಸ್ಕರ ಹಾತೊರೆಯುವ ಮನಸ್ಸು ಅವರದ್ದು. ತಮ್ಮ ಸ್ನೇಹ ಲೋಕದಿಂದಲೇ ಮಿತ್ರ ಎಂಬ ಹೆಸರನ್ನು ಪಡೆದು ಪರಿಚಿತರಾಗಿರೋ ಬಹುಮುಖ ಪ್ರತಿಭೆ. ಇವರಿಗೆ ಗೊತ್ತಿರೋದು ಮೂರೇ ಮೂರು ವಿಚಾರಗಳು. ಒಂದು ಸ್ನೇಹಿತರು, ಇನ್ನೊಂದು ಅಡುಗೆ, ಮತ್ತೊಂದು ಕಲೆ. ಈ ಮೂರು ವಿಚಾರಧಾರೆಗಳನ್ನು ತನು-ಮನವನ್ನಾಗಿಸಿಕೊಂಡು ದಿನದೂಡುತ್ತಿರುವ ನೀಯತ್ತಿನ ನಟ.
ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕೂಡ ಸಮಸ್ಯೆಯಿದ್ದ ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ಆದ್ರಿಂದು ವಿವಿಧ ಬಗೆಯ ಅಡುಗೆ ಮಾಡೋ ಬಾಣಸಿಗ. ಸಾಮಾನ್ಯ ಶಾಪ್ನ ರುಚಿಕರ ತಿಂಡಿಯಿಂದ ಹಿಡಿದು ಸೆವೆನ್ ಸ್ಟಾರ್ ಹೋಟೆಲ್ಗಳಲ್ಲಿ ಸಿಗುವ ಖಾದ್ಯಗಳನ್ನು ಚಿಟ್ಕೆ ಹೊಡೆದಂಗೆ ಮಾಡಿಬಿಡ್ತಾರೆ ನೋಡಿ.
ಈವರೆಗೂ ಮನಸ್ಸಿಗೆ ಕಚಗುಳಿ ಇಡೋ ಸಾವಿರಾರು ಕಾಮಿಡಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಈಗಲೂ ಅವಕಾಶ ಸಿಕ್ಕಾಗೆಲ್ಲಾ ನಡೆಸಿಕೊಡುತ್ತಾರೆ. ವೆಡ್ಡಿಂಗ್ ಈವೆಂಟ್ಗಳನ್ನೂ ಕೂಡ ಸಖತ್ ಕ್ರಿಯೆಟಿವ್ ಆಗಿ ಪ್ಲಾನ್ ಮಾಡೋ ಜಾಣೇಶ ಇವರು. ನಟನೆಯ ಜೊತೆಗೆ ಮದುವೆ ಕಾರ್ಯಕ್ರಮಗಳನ್ನು ಸುಸೂತ್ರವಾಗಿ, ಯಾವುದೇ ರೀತಿಯ ಹೆಚ್ಚು ಕಡಿಮೆ ಇಲ್ಲದೇ ಮಾಡಿಕೊಡೋ ಪ್ಲಾನರ್. ಎಂತದ್ದೇ ಪಾತ್ರ ಕೊಟ್ಟರೂ ನುಂಗಿ ನೀರು ಕೊಡಿಯೋ ಮಿತ್ರ ಮಾನವೀಯ ಕಾರ್ಯಗಳಲ್ಲೂ ಸದಾ ಮುಂದು.
ಕರ್ನಾಟಕದ ಪ್ರಚಂಡ ಕುಳ್ಳ ದಿವಂಗತ ದ್ವಾರಕೀಶ್ ಅವರನ್ನು ಸ್ಫೂರ್ತಿಯನ್ನಾಗಿಸಿಕೊಂಡಿರುವ ಇವರು 'ರಾಗ' ಅನ್ನೋ ಮನಮುಟ್ಟವ ಸಿನಿಮಾ ನಿರ್ಮಾಣ ಮಾಡಿ, ನಟಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಆದ್ರೆ ಅಂದು ಬಾಹುಬಲಿ ಸಿನಿಮಾ ಚಿತ್ರಮಂದಿರಗಳನ್ನು ಕಬ್ಜ ಮಾಡಿಕೊಂಡಿದ್ದರಿಂದ ಮಿತ್ರ ಕೈ ಸುಟ್ಟುಕೊಳ್ಳಬೇಕಾಯಿತು. ಆದ್ರೂ ಛಲಬಿಡದ ತ್ರಿವಿಕ್ರಮನಂತೆ ಚಿತ್ರರಂಗದಲ್ಲಿ ಎದ್ದು ನಿಲ್ಲಬೇಕು, ಕಲಾ ಸರಸ್ವತಿಯನ್ನು ಆರಾಧಿಸಲೇಬೇಕು ಅನ್ನೋ ಪಣದಿಂದ ಸಿನಿಮಾ ಎಂಬ ಕಲಾರಣಕಣದಲ್ಲಿ ಸಕ್ರಿಯರಾಗಿದ್ದಾರೆ.
ಇವರ ಸಿನಿಪಯಣದ ಆರಂಭವನ್ನು ಗಮನಿಸುವುದಾದರೆ, 2003ರಲ್ಲಿ ಶಿವಣ್ಣ ನಟನೆಯ 75ನೇ ಸಿನಿಮಾ 'ಶ್ರೀರಾಮ್' ಚಿತ್ರದ ಮೂಲಕ ಚಿತ್ರರಂಗ ಪ್ರವೆಶಿಸಿದರು. ಪಾಪಾ ಪಾಂಡು ಮತ್ತು ಸಿಲ್ಲಿ ಲಲ್ಲಿ ಧಾರಾವಾಹಿಗಳ ಮೂಲಕ ಕನ್ನಡಿಗರ ಮನೆ ಮನ ತಲುಪಿದರು. ಅದರಲ್ಲೂ ಯೋಗರಾಜ್ ಭಟ್ ಅವರ ಮನಸಾರೆ ಚಿತ್ರದ ಅವರ ಪಾತ್ರ, ಪಂಚರಂಗಿ ಸಿನಿಮಾದ ಜ್ಯೋತಿಷಿ ಪಾತ್ರ ಎಲ್ಲವೂ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹೀಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿಯೇ ಇದೆ. ಈವರೆಗೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಮಿತ್ರ.
ಇದನ್ನೂ ಓದಿ:ರಾಮ್ ಚರಣ್, ಅಲ್ಲು ಅರ್ಜುನ್ ಸುತ್ತುವರಿದ ಸಾವಿರಾರು ಅಭಿಮಾನಿಗಳು: ವಿಡಿಯೋ ನೋಡಿ - Ram Charan Allu Arjun
ಮಿತ್ರ ಶ್ರಮಜೀವಿ. ಯಾವುದೇ ಪಾತ್ರ ಸಿಗಲಿ ಲೀಲಾಜಾಲವಾಗಿ ಅಭಿನಯ ಮಾಡೋ ಸಾಮರ್ಥ್ಯವುಳ್ಳವರು. ಅನೇಕ ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ರಾಘವೇಂದ್ರ ಸ್ಟೋರ್ ಸಿನಿಮಾದಲ್ಲಿ ಮಾತು ಬರದವರ ಪಾತ್ರ ಮಾಡಿದ್ದರು. ವಿಡಿಯೋ ವೈರಲ್ ಆಗಿ ಜನಮನ ಸೆಳೆದಿತ್ತು. ಪ್ರದೀಪ್ ನಿರ್ದೇಶನದ ಕೋಮಲ್ ಕುಮಾರ್ ಮತ್ತು ಸಹನಾಮೂರ್ತಿ ನಿರ್ಮಾಣದ ಯಲ್ಲಾಕುನ್ನಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿ ಸದ್ದು ಮಾಡಿದ್ದರು. ಸುಗಂಧ ರಾಜ ಅನ್ನೋ ಕಾಮಿಡಿ ಕಮ್ ವಿಲನ್ ಕ್ಯಾರೆಕ್ಟರ್ ಕೂಡ ಗಮನ ಸೆಳೆದಿದೆ.
ಇದನ್ನೂ ಓದಿ:'ಯಾರಿಗೂ ಹೀಗಾಗಬಾರದು': ಸಲ್ಮಾನ್ ಮನೆ ಹೊರಗಿನ ಗುಂಡಿನ ದಾಳಿ ಬಗ್ಗೆ ಮಾಜಿ ಗೆಳತಿ ಸೋಮಿ ಅಲಿ ಪ್ರತಿಕ್ರಿಯೆ - Somy Ali on Salman
ಇನ್ನೂ ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಮುಂದೊಂದು ದಿನ ಜನ ಈ ಚಿತ್ರದ ಬಗ್ಗೆಯೂ ಮಾತನಾಡುತ್ತಾರೆ. ಅಷ್ಟರ ಮಟ್ಟಿಗಿದೆ ಮಿತ್ರ ಅವರ ಪಾತ್ರ. ಸಿನಿಮಾದಲ್ಲಿ ಒಂದು ವಿಶೇಷ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂದೂ ಕೂಡ ಗಡ್ಡ ಮೀಸೆ ಬಿಡದ ಮಿತ್ರ ಮೊದಲ ಬಾರಿಗೆ ಬಿಳಿ ಗಡ್ಡ-ಮೀಸೆ ಬಿಟ್ಟಿದ್ದಾರೆ. ಪಾತ್ರಕ್ಕಾಗಿ ಎರಡು ತಿಂಗಳು ಜಿಮ್ನಲ್ಲಿ ಕಸರತ್ತು ಮಾಡಿ 95 ಕೆ.ಜಿಯಿಂದ 70 ಕೆ.ಜಿಗೆ ಬಂದು ತಲುಪಿದ್ದಾರೆ. ತೂಕ ಇಳಿಸಿಕೊಂಡು 60ರ ಹರೆಯದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಮತ್ತೊಂದು ಶೇಡ್ಗಾಗಿ ಮತ್ತೆ 15 ಕೆ.ಜಿ ಡೌನ್ ಆಗಿ ಕ್ಯಾಮರಾಗೆ ಕೈ ಮುಗಿಯಲಿದ್ದಾರೆ ಇಂತಹ ಡೆಡಿಕೇಟೆಡ್ ಕಲಾವಿದನಿಗೆ ಮತ್ತಷ್ಟು ಮಗದಷ್ಟು ಪಾತ್ರಗಳು ಸಿಗಬೇಕು ಅನ್ನೋದು ಅಭಿಮಾನಿಗಳ ಆಸೆ.