ದಕ್ಷಿಣದ ಅತ್ಯಂತ ಜನಪ್ರಿಯ ನಟ ಸೂರ್ಯ ಶಿವಕುಮಾರ್ ಅವರಿಗಿಂದು ಜನ್ಮದಿನದ ಸಂಭ್ರಮ. 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೌತ್ ಸೂಪರ್ ಸ್ಟಾರ್ಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರು, ಆತ್ಮೀಯರು, ಅಭಿಮಾನಿಗಳೂ ಸೇರಿದಂತೆ ಎಲ್ಲೆಡೆಯಿಂದ ಶುಭಾಶಯಗಳ ಸಂದೇಶ ಹರಿದುಬಂದಿದೆ. ಮೆಚ್ಚಿನ ನಟನ ಬರ್ತ್ಡೇಗೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಮುಂದಿನ ಸಿನಿಮಾಗಳ ಅಪ್ಡೇಟ್ಸ್ ನಿರೀಕ್ಷಿಸಿದ್ದರು. ಅದರಂತೆ ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಂಗುವ' ತಯಾರಕರಿಂದು 'ಫೈಯರ್' ಶೀರ್ಷಿಕೆಯ ಹಾಡನ್ನು ಬಹು ಭಾಷೆಗಳಲ್ಲಿ ಅನಾವರಣಗೊಳಿಸಿ ನಾಯಕ ನಟನಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.
ಹೌದು, ಬಹುನಿರೀಕ್ಷಿತ ಚಿತ್ರದ ಬಹುನಿರೀಕ್ಷಿತ ಹಾಡು ಬಿಡುಗಡೆಗೊಂಡಿದೆ. ಅಭಿಮಾನಿಗಳಿಗಿದು ತಮ್ಮ ಮೆಚ್ಚಿನ ನಟನ ಬರ್ತ್ಡೇ ಟ್ರೀಟ್ ಅಂತಲೇ ಹೇಳಬಹುದು. ಈ ಹಾಡಿನಲ್ಲಿ ಸೂರ್ಯ ಬುಡಕಟ್ಟು ಜನಾಂಗದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಸಂಭ್ರಮಾಚರಣೆಯ ಗೀತೆಯಂತೆ ತೋರುತ್ತಿದೆ.
ಹಾಡು, 'ಕಂಗುವ' ಅದ್ಭುತ ಸಿನಿಮೀಯ ಅನುಭವ ನೀಡಲಿದೆ ಅನ್ನೋ ಭರವಸೆ ನೀಡಿದೆ. ಜೊತೆಗೆ, ಬಹು ನಿರೀಕ್ಷಿತ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ. ಸೂರ್ಯ ಅವರ ಪಾತ್ರದ ಉಗ್ರ ಮತ್ತು ನಿರ್ಭೀತ ಸ್ವಭಾವವು ಈ ಹಾಡಿನಲ್ಲಿ ಪ್ರದರ್ಶಿಸಲ್ಪಟ್ಟಿದೆ. ಈ ಸಾಂಗ್ನ ಬೀಟ್, ದೃಶ್ಯ ವೈಭವ ಚಿತ್ರದಲ್ಲಿನ ಸೂರ್ಯನ ಅವರ ಪಾತ್ರಕ್ಕೆ ಸಂದ ಗೌರವ ಅಂತಲೇ ಹೇಳಬಹುದೆಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.