ಶಿಮ್ಲಾ (ಹಿಮಾಚಲ ಪ್ರದೇಶ): ಬಾಲಿವುಡ್ ನಟಿ ಹಾಗೂ ಹಿಮಾಚಲ ಪ್ರದೇಶದ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದೇಶದ ರೈತರ ಪ್ರತಿಭಟನೆಯನ್ನು ಬಾಂಗ್ಲಾದೇಶ ದಂಗೆಗೆ ಹೋಲಿಸಿ ಮಾತನಾಡಿದ್ದಾರೆ. ರೈತರ ಹೋರಾಟದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಹೇಳಿದ್ದು, ನಟಿಯ ಹೇಳಿಕೆಗಳಿಗೀಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ವಿಡಿಯೋವನ್ನು ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ''ಬಾಂಗ್ಲಾದೇಶದಲ್ಲಿ ಏನಾಯಿತು, ಒಂದು ವೇಳೆ ನಮ್ಮ ದೇಶದ ನಾಯಕತ್ವ ಬಲವಾಗಿರಲಿಲ್ಲವೆಂದರೆ ಇಲ್ಲಿಯೂ (ಭಾರತದಲ್ಲಿ) ಅಂತಹ ಘಟನೆಗಳು ಸಂಭವಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿರಲಿಲ್ಲ" ಎಂಬುದಾಗಿ ಹೇಳಿದ್ದಾರೆ.
'ರೈತ ಪ್ರತಿಭಟನೆ ಒಂದು ಪ್ಲ್ಯಾನ್':ಇಲ್ಲಿ ನಡೆದ ರೈತ ಪ್ರತಿಭಟನೆ ಸಂದರ್ಭ ಅನೇಕ ಸಾವುನೋವುಗಳಾದವು. ಅತ್ಯಾಚಾರಗಳಂತಹ ದುರ್ಘಟನೆಯೂ ಸಂಭವಿಸಿತು. ರೈತರ ಹಿತಾಸಕ್ತಿಯನ್ನೊಳಗೊಂಡ ಮಸೂದೆಯನ್ನು ಹಿಂತೆಗೆದುಕೊಂಡಾಗ ಇಡೀ ದೇಶಕ್ಕೇನೆ ಶಾಕ್ ಆಯಿತು. ಆ ರೈತರಿನ್ನೂ ಅಲ್ಲೇ ಕುಳಿತಿದ್ದಾರೆ. ಬಿಲ್ ಹಿಂಪಡೆದಿರುವುದು ಸಹ ಅವರಿಗೆ ಗೊತ್ತಿಲ್ಲ. ಇದು ಬಾಂಗ್ಲಾದೇಶದಲ್ಲಿ ನಡೆದಂತೆ ದೀರ್ಘಾವಧಿಯ ಯೋಜನೆಯಾಗಿತ್ತು. ಈ ರೀತಿಯ ಷಡ್ಯಂತ್ರದ ಹಿಂದೆ ಚೀನಾ ಮತ್ತು ಅಮೆರಿಕದಂತಹ ವಿದೇಶಿ ಶಕ್ತಿಗಳಿದ್ದವು. ಅವು ಇಲ್ಲಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಮಿಶ್ರ ಪ್ರತಿಕ್ರಿಯೆ:ಬಿಜೆಪಿ ಸಂಸದೆಯ ಹೇಳಿಕೆಗಳು ಪರ ವಿರೋಧ ಚರ್ಚೆಗೆ ಎಡೆಮಾಡಿಕೊಟ್ಟಿವೆ. ಪ್ರತಿಪಕ್ಷಗಳಿಂದ ಆಕ್ರೋಶ ಎದುರಿಸುತ್ತಿದ್ದು, ಪಂಜಾಬ್‌ನ ವಿರೋಧ ಪಕ್ಷದ ನಾಯಕರು ನಟಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಬಿಜೆಪಿ ಸಂಸದೆಯ ಬಂಧನಕ್ಕೆ ಆಗ್ರಹ: ಕಾಂಗ್ರೆಸ್ ನಾಯಕ ರಾಜ್ ಕುಮಾರ್ ವರ್ಕಾ ಅವರು ಕಂಗನಾ ರನಾವತ್ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನಟಿಯ ವಿರುದ್ಧ ಪ್ರಕರಣ ದಾಖಲಿಸಿ ದಿಬ್ರುಗಢ ಜೈಲಿಗೆ ಕಳುಹಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಮನವಿ ಮಾಡಿದ್ದಾರೆ. ಕಂಗನಾ ಬಿಜೆಪಿಯ ಬೆಂಬಲವನ್ನು ಹೊಂದಿರುವುದರಿಂದ ತಮ್ಮ ಮಾತಿಗೆ ಕಡಿವಾಣ ಹಾಕುವುದಿಲ್ಲ. ಇದೆಲ್ಲವನ್ನು ಬಿಜೆಪಿಯೇ ನಡೆಸುತ್ತಿದೆ" ಎಂದು ವರ್ಕಾ ದೂರಿದರು.
'ಕಂಗನಾ ಭಾಷಣಕ್ಕೆ ಕಡಿವಾಣ'ವಿಲ್ಲ:ಆಮ್ ಆದ್ಮಿ ಪಕ್ಷದ (ಎಎಪಿ) ಪಂಜಾಬ್ ಹಿರಿಯ ವಕ್ತಾರ ನೀಲ್ ಗಾರ್ಗ್ ಅವರು ಕಂಗನಾರ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ಬಿಜೆಪಿ ಸಂಸದೆ ಪಂಜಾಬ್ ವಾತಾವರಣವನ್ನು ಹಾಳು ಮಾಡುವ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಕಂಗನಾ ರಣಾವತ್ ಕೆಲವೊಮ್ಮೆ ಪಂಜಾಬ್ ರೈತರನ್ನು ದೂಷಿಸುವ ಹೇಳಿಕೆಗಳನ್ನು ನೀಡುತ್ತಾರೆ, ಕೆಲವೊಮ್ಮೆ ಪಂಜಾಬಿಗಳನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ. ಅವರಿಗೆ ಬಿಜೆಪಿ ಕೇಂದ್ರ ನಾಯಕತ್ವದ ಬೆಂಬಲವಿರುವುದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಅಥವಾ ಪಕ್ಷ ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆಗಳನ್ನು ನೀಡುವಂತೆ ತಿಳಿಸುತ್ತಿದೆ ಎಂದು ತೋರುತ್ತಿದೆ ಎಂದು ಹೇಳಿದ್ದಾರೆ.