ಕೇರಳ: ಮೂಲತಃ ಜಪಾನ್ ದೇಶದ ರಾಜಧಾನಿ ಟೋಕಿಯೋದವರಾದ ಹಿರೋಮಿ ಮಾರುಹಶಿ ಎಂಬ ಮಹಿಳೆ ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳ ಪೈಕಿ ಒಂದಾದ 'ಮೋಹಿನಿಯಾಟ್ಟಂ'ನಲ್ಲಿ ಪರಿಣಿತರಾಗಿ ಜನಪ್ರಿಯರಾಗಿದ್ದಾರೆ. 'ಮೋಹಿನಿಯಾಟ್ಟಂ' ದಕ್ಷಿಣ ಭಾರತದ ದೇವರ ನಾಡು ಖ್ಯಾತಿಯ ಕೇರಳದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ನೃತ್ಯವನ್ನು ಸಾಂಪ್ರದಾಯಿಕವಾಗಿ ಮಹಿಳೆಯರು ಏಕಾಂಗಿಯಾಗಿ ಪ್ರದರ್ಶಿಸುತ್ತಾರೆ. ಇದಕ್ಕೆ ಕಠಿಣ ತರಬೇತಿಯ ಅಗತ್ಯವಿದೆ.
ಹಿರೋಮಿ ಮಾರುಹಶಿ ಅವರ ಕಲಾ ಪಯಣ 1998ರಲ್ಲಿ ಪ್ರಾರಂಭವಾಗಿತ್ತು. ಸ್ಥಳೀಯ ಕಲಾ ಪ್ರಕಾರಗಳನ್ನು ಅನ್ವೇಷಿಸುವ ಉದ್ದೇಶ ಮತ್ತು ಅವುಗಳನ್ನು ಕರಗತ ಮಾಡಿಕೊಳ್ಳುವ ಬಯಕೆಯೊಂದಿಗೆ ಇವರು ಭಾರತಕ್ಕೆ ಬಂದಿದ್ದರು. ಇಂಟರ್ನೆಟ್ ಸೇರಿದಂತೆ ಇತರೆ ಸಂವಹನ ವ್ಯವಸ್ಥೆಗಳ ಕೊರತೆಯಿಂದಾಗಿ ಭಾರತ ಮತ್ತು ಕೇರಳದ ಬಗ್ಗೆ ಅರಿಯುವುದು, ಕಲಿಯುವುದು ಸವಾಲಾಗಿತ್ತು. ಇದಕ್ಕಾಗಿ ಪುಸ್ತಕಗಳನ್ನು ಅವಲಂಬಿಸಿದರು. ಹಲವು ಅಡೆತಡೆಗಳ ಹೊರತಾಗಿಯೂ ತಮ್ಮ ಜ್ಞಾನದ ಅನ್ವೇಷಣೆಗೆ ತಮ್ಮನ್ನು ಸಮರ್ಪಿಸಿಕೊಂಡರು. ಕಠಿಣ ಪರಿಶ್ರಮದ ಫಲವಾಗಿ ಇಂದು ಹಿರೋಮಿ ಅವರಿಗೆ ಮೋಹಿನಿಯಾಟ್ಟಂ ಕರತಲಾಮಲಕವಾಗಿದೆ.
ವಿಶ್ವದೆಲ್ಲೆಡೆ ಸಾವಿರಕ್ಕೂ ಹೆಚ್ಚು ಪ್ರದರ್ಶನ: ಕೇರಳದ ಗೌರವಾನ್ವಿತ 'ನಂಗಿಯಾರ್ ಕುತು' ಕಲಾವಿದೆಯಾದ ಮಾರ್ಗಿ ಸತಿ ಅವರು ಹಿರೋಮಿ ಮಾರುಹಶಿ ಕಲಿಕೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದರಂತೆ. ನಂಗ್ಯಾರ್ ಕೂತು ನಂತರ ಹಿರೋಮಿ ಕಲರಿಪಯಟ್ಟು ಮತ್ತು ಭರತನಾಟ್ಯಂ ನೃತ್ಯಗಳನ್ನು ಅಧ್ಯಯನ ಮಾಡಿದರು. ನರ್ತಕಿ, ಶಿಕ್ಷಕಿ ಕಲಾಮಂಡಲಂ ಲೀಲಮ್ಮನವರ ಮಾರ್ಗದರ್ಶನದಲ್ಲಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಹಿರೋಮಿ ಭಾರತ ಮತ್ತು ವಿದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.