ಕೆಜಿಎಫ್ 1 ಹಾಗೂ ಚಾಪ್ಟರ್ 2ರ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಕನ್ನಡದ ಪ್ರತಿಭೆ ಯಶ್. ಹೆಸರಲ್ಲೇ ಯಶಸ್ಸು ಹೊಂದಿರುವ ಈ ಸಿನಿ ಸಾಧಕ ತಮ್ಮ ಮುಂದಿನ ಚಿತ್ರಕ್ಕೆ ಅಣಿಯಾಗಿದ್ದಾರೆ.
'ಟಾಕ್ಸಿಕ್' ಕೇವಲ ಕನ್ನಡಕ್ಕೆ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ರಾಕಿಂಗ್ ಸ್ಟಾರ್ನ ಈ ಪ್ರೊಜೆಕ್ಟ್ ಮೇಲೆ ಪ್ರೇಕ್ಷಕರು, ಅಪಾರ ಸಂಖ್ಯೆಯ ಅಭಿಮಾನಿಗಳು ಮಾತ್ರವಲ್ಲದೇ ಸಿನಿಕ್ಷೇತ್ರದ ಖ್ಯಾತನಾಮರೂ ಕೂಡಾ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕರಾವಳಿ ದೇವಸ್ಥಾನಗಳ ಭೇಟಿ ಸಲುವಾಗಿ ಗಮನ ಸೆಳೆದಿದ್ದ ರಾಕಿಭಾಯ್ ಗುರುವಾರದಂದು ತಮ್ಮ 'ಟಾಕ್ಸಿಕ್' ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ ಇಟ್ಟುಕೊಂಡಿದ್ದರು. ಇದೀಗ ಬ್ಲಾಕ್‌ಬಸ್ಟರ್ ಕೆಜಿಎಫ್ ಚಿತ್ರಗಳನ್ನು ನಿರ್ಮಿಸಿದ್ದ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಯಶ್ 'ಟಾಕ್ಸಿಕ್' ಯಶಸ್ಸಿಗೆ ಶುಭ ಹಾರೈಸಿದೆ.
ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಯಶ್ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ಕೆಜಿಎಫ್ 2. 2022ರ ಏಪ್ರಿಲ್ 14ರಂದು ತೆರೆಕಂಡ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ದಕ್ಷಿಣ ಚಿತ್ರರಂಗದ ಜನಪ್ರಿಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ಬಂಡವಾಳ ಹೂಡಿದ್ದರು. ಸಿನಿಮಾ ನಿರೀಕ್ಷೆಗೂ ಮೀರಿ ಯಶ ಕಂಡಿದ್ದಲ್ಲದೇ ಸಾವಿರ ಕೊಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಮೂಲಕ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಯಶ್, ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ಜನಪ್ರಿಯತೆ ಡೊಡ್ಡ ಮಟ್ಟದಲ್ಲಿ ಹೆಚ್ಚಾಯಿತು.
ಹೊಂಬಾಳೆ ಫಿಲ್ಮ್ಸ್ ಯಶ್ ಅವರನ್ನೊಳಗೊಂಡ ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಹಿನ್ನೆಲೆಯಲ್ಲಿ ಟಾಕ್ಸಿಕ್ ಟೀಮ್ ಅನ್ನು ಕಾಣಬಹುದು. ಪೋಸ್ಟರ್ ಮೇಲೆ ನಮ್ಮ ರಾಕಿಂಗ್ ಸ್ಟಾರ್ ಹಾಗೂ ಸಂಪೂರ್ಣ ಚಿತ್ರತಂಡಕ್ಕೆ ಬೆಸ್ಟ್ ವಿಶಸ್ ಎಂದು ಬರೆದುಕೊಂಡಿದೆ. ಕ್ಯಾಪ್ಷನ್ನಲ್ಲಿ, ''ಟಾಕ್ಸಿಕ್ ಸಿನಿಮಾ ಮೂಲಕ ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸುತ್ತೇವೆ. ಈ ಬ್ಲಾಕ್‌ಬಸ್ಟರ್ ಪ್ರಯಾಣ ಆರಂಭಿಸುತ್ತಿರುವ ಇಡೀ ತಂಡಕ್ಕೆ ಶುಭ ಹಾರೈಕೆಗಳು. ಪರದೆ ಮೇಲೆ ಬೆಂಕಿ ಹಚ್ಚಲು ಸಜ್ಜಾಗಿ'' ಎಂದು ಬರೆಯಲಾಗಿದೆ.