'ಹೊಂಬಾಳೆ ಫಿಲ್ಮ್ಸ್', ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ. ಈಗಾಗಲೇ ಹಲವು ಹಿಟ್ ಚಿತ್ರಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದೆ. ವಿಶೇಷವಾಗಿ, ಕೆಜಿಎಫ್, ಕಾಂತಾರ, ಸಲಾರ್ ನಂತಹ ಸಿನಿಮಾಗಳಿಂದ ಸಾಕಷ್ಟು ಹೆಸರು ಮಾಡಿದೆ. ಇದೀಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಮೂರು ಹೊಸ ಸಿನಿಮಾಗಳನ್ನು ಘೋಷಿಸಿದೆ.
ಹೊಂಬಾಳೆ ಫಿಲ್ಮ್ಸ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದೆ. ''ಭಾರತೀಯ ಸಿನಿಮಾವನ್ನು ಆಚರಿಸುವ ಮತ್ತು ಅದನ್ನು ಜಗತ್ತಿಗೆ ಒದಗಿಸುವ ಗುರಿಯನ್ನು ಹೊಂದಿರುವ ಮೂರು ಸಿನಿಮಾಗಳನ್ನು ರೆಬೆಲ್ ಸ್ಟಾರ್ ಅವರೊಂದಿಗೆ ಸೇರಿ ಮಾಡಲು ನಾವು ಬಹಳ ಹೆಮ್ಮೆಪಡುತ್ತೇವೆ. ಇದು ಮರೆಯಲಾಗದ ಅದ್ಭುತ ಸಿನಿ ಅನುಭವಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯ ಘೋಷಣೆ. ಮುಂದಿನ ಮಾರ್ಗ ಅಪರಿಮಿತ. ಈ ಪ್ರಯಾಣ ಸಲಾರ್ 2 ಜೊತೆ ಪ್ರಾರಂಭವಾಗುತ್ತಿದ್ದು, ಸಿದ್ಧರಾಗಿ'' ಎಂದು ಬರೆದುಕೊಂಡಿದ್ದಾರೆ. ಸಲಾರ್ 2 ಸೇರಿ ಮತ್ತೆರಡು ಹೊಸ ಚಿತ್ರಗಳನ್ನು ಅನೌನ್ಸ್ ಮಾಡಲಾಗಿದೆ. 2026, 2027, 2028ಕ್ಕೆ ಈ ಸಿನಿಮಾಗಳು ಬಿಡುಗಡೆ ಆಗಲಿದೆ. ನಿಗದಿತ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.
ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಸಾಕಷ್ಟು ಖ್ಯಾತಿ ಹೊಂದಿರುವ ಪ್ರಭಾಸ್ ಅವರು ಹೊಂಬಾಳೆ ಫಿಲ್ಮ್ಸ್ ಜೊತೆಗೆ ಮೂರು ಬಿಗ್ ಪ್ರಾಜೆಕ್ಟ್ಗೆ ಸಹಿ ಹಾಕಿದ್ದಾರೆ. ಆ್ಯಕ್ಷನ್-ಪ್ಯಾಕ್ಡ್ ''ಸಲಾರ್ 2'' ಮಹತ್ವದ ಪ್ರಾಜೆಕ್ಟ್ಗಳಲ್ಲೊಂದು. 2023ರ ಕೊನೆಗೆ ತೆರೆಕಂಡ ಈ ಚಿತ್ರದ ಸೀಕ್ವೆಲ್ ಬರೋದು ನಿಮಗೆ ತಿಳಿದಿರುವ ವಿಚಾರವೇ. ಇಂದು ಅನೌನ್ಸ್ ಮಾಡಿರುವ ಮೂರು ಸಿನಿಮಾಗಳಲ್ಲಿ ಸಲಾರ್ 2 ಕೂಡಾ ಒಂದು. ಬಹುನಿರೀಕ್ಷಿತ ಸಲಾರ್ 2 ಮತ್ತು ಎರಡು ಹೆಚ್ಚುವರಿ ಸಿನಿಮಾಗಳನ್ನೊಳಗೊಂಡಿರುವ ಈ ಒಪ್ಪಂದವು ಪ್ರಭಾಸ್ ಮತ್ತು ಹೊಂಬಾಳೆ ಸಂಸ್ಥೆಗಳೆರಡಕ್ಕೂ ಹೊಸ ಅಧ್ಯಾಯದ ಆರಂಭವನ್ನು ಸೂಚಿಸಿದೆ. ಈ ಸಿನಿಮಾಗಳು ಕ್ರಮವಾಗಿ 2026, 2027 ಮತ್ತು 2028ರಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಮತ್ತು ರಿಷಬ್ ಶೆಟ್ಟಿ ಸಾರಥ್ಯದ ಕಾಂತಾರ ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳೊಂದಿಗೆ ಭಾರತೀಯ ಚಿತ್ರರಂಗದಲ್ಲಿ ಪವರ್ಫುಲ್, ಪಾಪ್ಯುಲರ್ ಸಿನಿಮಾ ಪ್ರೊಡಕ್ಷನ್ ಹೌಸ್ ಆಗಿ ಗುರುತಿಸಿಕೊಂಡ ಹೊಂಬಾಳೆ ಫಿಲ್ಮ್ಸ್ ಈ ಪಾರ್ಟ್ನರ್ಶಿಪ್ ಮೂಲಕ ತನ್ನ ಗಡಿಯನ್ನು ವಿಸ್ತರಿಸುತ್ತಿದೆ. ಹೊಂಬಾಳೆ ಫಿಲ್ಮ್ಸ್ ಕರುನಾಡಿನಲ್ಲಿ ಕಮರ್ಷಿಯಲ್ ಸಿನಿಮಾವನ್ನು ಮರುವ್ಯಾಖ್ಯಾನಿಸಿದ್ದು ಮಾತ್ರವಲ್ಲದೇ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಕೆಜಿಎಫ್ ಚಾಪ್ಟರ್ 3 ಮತ್ತು ಕಾಂತಾರ 2 ಈಗಾಗಲೇ ಸಂಸ್ಥೆ ಕೈಯಲ್ಲಿದೆ. ಇದೀಗ ಪ್ರಭಾಸ್ ಅವರೊಂದಿಗಿನ ಈ ಒಪ್ಪಂದ ಅಭಿಮಾನಿಗಳ ನಿರೀಕ್ಷೆಗಳನ್ನು ದ್ವಿಗುಣಗೊಳಿಸಿದೆ.