ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಹಲವರು ಇದೇ ಕ್ಷೇತ್ರದಲ್ಲಿರುವವರನ್ನು ಪ್ರೀತಿಸಿ ಮದುವೆಯಾದ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಸ್ಯಾಂಡಲ್ವುಡ್ ಕೂಡಾ ಇದರಿಂದ ಹೊರತಲ್ಲ. ಕಲಾವಿದರು ಪರಸ್ಪರ ಪ್ರೀತಿಸಿ ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿರುವ ಚೆಂದದ ಜೋಡಿಗಳು ಚಂದನವನದಲ್ಲಿವೆ. ಆ ಪೈಕಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ಕೂಡಾ ಒಂದು. ಇದೀಗ ಪೋಷಕರಾಗುತ್ತಿರುವ ಖುಷಿಯಲ್ಲಿ ಈ ಸ್ಯಾಂಡಲ್ವುಡ್ ಕಪಲ್ ಇದ್ದಾರೆ. ಬ್ಯೂಟಿಫುಲ್ ಬೇಬಿಬಂಪ್ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
7 ತಿಂಗಳ ಗರ್ಭಿಣಿ ಹರ್ಷಿಕಾ ಪೂಣಚ್ಚ: ಹೌದು, ಚಂದನವನದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟಿ ಹರ್ಷಿಕಾ ಪೂಣಚ್ಚ ಒಂದು ಸುಂದರ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿದ್ದಾರೆ. ರವಿವರ್ಮ ಪೇಂಟಿಂಗ್ ಥೀಮ್ನಲ್ಲಿ ಈ ಫೋಟೋಶೂಟ್ ಮೂಡಿಬಂದಿದೆ. ನಟಿಯೀಗ 7 ತಿಂಗಳ ಗರ್ಭಿಣಿ. ಕಳೆದ ವರ್ಷ ದಾಂಪತ್ಯ ಜೀವನ ಆರಂಭಿಸಿದ್ದ ಹರ್ಷಿಕಾ ಭುವನ್ ಶೀಘ್ರದಲ್ಲೇ ಪೋಷಕರಾಗಿ ಭಡ್ತಿ ಪಡೆಯಲಿದ್ದಾರೆ.
ಅಕ್ಟೋಬರ್ನಲ್ಲಿ ಮಗುವಿನ ಜನನ:ಸರಿಸುಮಾರು 10 ವರ್ಷಗಳಿಂದ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಭುನ್ ಮತ್ತು ಹರ್ಷಿಕಾ 2023ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. ಈ ಸಾಲಿನ ಜುಲೈ 2ರಂದು ತಾವು ಪೋಷಕರಾಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡರು. ಸಂಪೂರ್ಣ ಕೊಡಗು ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದ ತಾರಾ ದಂಪತಿ, ''ಸ್ನೇಹಿತರೇ, ಈವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ. ಇನ್ನು ಮುಂದೆ ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲೂ ಇರಲಿ. ಅಕ್ಟೋಬರ್ಗೆ ಕಾತುರದಿಂದ ಕಾಯುತ್ತಿದ್ದೇವೆ. ಇಂತಿ ನಿಮ್ಮ ಭುವನ್, ಹರ್ಷಿಕಾ'' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಅಕ್ಟೋಬರ್ನಲ್ಲಿ ಮಗುವಿನ ಜನನ ಆಗಲಿದೆ ಎಂದು ಕೂಡಾ ತಿಳಿಸಿದ್ದರು.