ಒಂದೇ ಕ್ಷೇತ್ರದಲ್ಲಿ ದುಡಿಯುವವರು ಅದೇ ಕ್ಷೇತ್ರದವರನ್ನು ಪ್ರೀತಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಕನ್ನಡ ಚಿತ್ರರಂಗವೂ ಇದರಿಂದ ಹೊರತೇನಲ್ಲ. ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಬೇಡಿಕೆ ಸೃಷ್ಟಿಸಿರುವ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ 2023ರ ಆರಂಭದಲ್ಲಿ ವಿವಾಹವಾಗಿದ್ದರು. ಇದೀಗ ತಮ್ಮ ಮೊದಲ ಮಗುವಿಗಾಗಿ ಎದುರು ನೋಡುತ್ತಿರುವ ತಾರಾ ದಂಪತಿ ಆಕರ್ಷಕ ಬೇಬಿಬಂಪ್ ಫೋಟೋಶೂಟ್ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.
ಸ್ಯಾಂಡಲ್ವುಡ್ ಸ್ಟಾರ್ ಕಪಲ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹೊಸ ವಿಡಿಯೋ ಶೇರ್ ಮಾಡಿದ್ದಾರೆ. ಬಿಳಿ ಉಡುಗೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬೇಬಿಬಂಪ್ ಗೋಚರಿಸಿದ್ದು, ತುಂಬು ಗರ್ಭಿಣಿಯ ಕಳೆ ನದುಮೊಗದಲ್ಲಿದೆ. ಉಡುಗೆಯ ಅಂದ ಹೆಚ್ಚಿಸುವಂತಿದೆ ಅವರು ತೊಟ್ಟಿರುವ ಆಭರಣಗಳು. ಹಿಂಭಾಗ ರಾಜಮನೆತನವನ್ನು ಹೋಲುವಂತಿದೆ. ಈ ಪೋಸ್ಟ್ಗೆ 'ಜೊತೆಯಾಗಿ..ಹಿತವಾಗಿ' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಮುದ್ದಿನ ದಂಪತಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಯ ಧಾರೆ ಎರೆಯುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಇವರ ಫೊಟೋ, ವಿಡಿಯೋಗಳು ವೈರಲ್ ಆಗುತ್ತಿವೆ. ಹೆಚ್ಚಿನವರು ಹಾರ್ಟ್ ಎಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, ಸಿಂಹ ಪ್ರಿಯಾ (ರೆಡ್ ಹಾರ್ಟ್ ಎಮೋಜಿಯೊಂದಿಗೆ) ಎಂದು ತಿಳಿಸಿದ್ದಾರೆ. ದೇವರು ಆಶೀರ್ವದಿಸಲಿ ಎಂದು ಮತ್ತೋರ್ವ ತಿಳಿಸಿದ್ದಾರೆ. ಹೀಗೆ ಅಭಿಮಾನಿಗಳ ಅಭಿನಂದನೆ, ಶುಭಹಾರೈಕೆಗಳ ಪ್ರೀತಿಯ ಸಂದೇಶಗಳು ಚಂದನವನದ ತಾರಾ ದಂಪತಿ ಮೇಲೆ ಹರಿದುಬರುತ್ತಿದೆ.