ನೈಜ ಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಟೈಟಲ್ ಆಗೋದು ಹೊಸತೇನೆಲ್ಲ. ಇದೀಗ ಶಾಸಕ ಜಮೀರ್ ಅಹಮದ್ ಖಾನ್ ಹಿಂದೊಮ್ಮೆ ಹೇಳಿದ 'CONGRATULATIONS ಬ್ರದರ್' ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದರ ಜೊತೆಗೆ ಟ್ರೆಂಡ್ ಆಗಿತ್ತು. ಇದೀಗ 'CONGRATULATIONS ಬ್ರದರ್' ಎಂಬ ಸಿನಿಮಾ ಬರುತ್ತಿದೆ.
ಕನ್ನಡದಲ್ಲಿ ಅಲೆಮಾರಿ ಹಾಗೂ ಇತ್ತೀಚೆಗೆ 'ಕಾಲೇಜ್ ಕುಮಾರ' ಎಂಬ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ ನಿರ್ದೇಶಕ ಹರಿ ಸಂತೋಷ್ ಸಾರಥ್ಯದಲ್ಲಿ ಎರಡು ವಿಭಿನ್ನ ಚಿತ್ರಗಳು ಕಾರ್ತಿಕ ಸೋಮವಾರದ ಶುಭ ದಿನದಂದು ಲಾಂಚ್ ಆದವು. ಕೆವಿಎನ್ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ವೆಂಕಟ್ ನಾರಾಯಣ್ ಡಿ.ಎಸ್ ಮ್ಯಾಕ್ಸ್ನ ದಯಾನಂದ್ ಈ ಎರಡು ಸಿನಿಮಾ ಪೋಸ್ಟರ್ ಅನಾವರಣ ಮಾಡಿದರು.
ಮೊದಲು 'ಡಿಸ್ಕೋ' ಎಂಬ ಹೆಸರಿನ ಚಿತ್ರತಂಡದ ಸದಸ್ಯರು ಮಾತನಾಡಿದರು. ಅಲೆಮಾರಿ ಚಿತ್ರದೊಂದಿಗೆ ನಿರ್ದೇಶಕನಾಗಿ ಸಿನಿ ಜರ್ನಿ ಆರಂಭಿಸಿ, ಇಲ್ಲಿಯವರೆಗೂ ಹಲವು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಹರಿ ಸಂತೋಷ್ ಮಾತನಾಡಿ, 'ಡಿಸ್ಕೋ' ಎಂಬುದು ನಾಯಕನ ಅಡ್ಡ ಹೆಸರು. ವಿಕ್ಕಿ ವರುಣ್ ಈ ಚಿತ್ರದ ನಾಯಕ. ನನ್ನ ಹಾಗೂ ವಿಕ್ಕಿ ವರಣ್ ಕಾಂಬಿನೇಶನ್ನಲ್ಲಿ 'ಕಾಲೇಜ್ ಕುಮಾರ' ಬಳಿಕ ಈ ಚಿತ್ರ ಮೂಡಿ ಬರುತ್ತಿದೆ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ. ನಮ್ಮ ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಕಲ್ಲೂರ್ ಸಿನಿಮಾಸ್ ಬ್ಯಾನರ್ನಲ್ಲಿ ಚಿತ್ರ ಬರುತ್ತಿದೆ. ಪ್ರಶಾಂತ್ ಕಲ್ಲೂರ್ ಹಾಗೂ ಹರೀಶ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಧ್ರುವ್ ಸಂಗೀತ ನೀಡಲಿದ್ದಾರೆ'' ಎಂದರು.
'ಡಿಸ್ಕೋ' ಚಿತ್ರದ ನಾಯನ ನಟ ವಿಕ್ಕಿ ವರಣ್ ಮಾತನಾಡಿ, ''ಇದು ನಾನು ನಾಯಕನಾಗಿ ನಟಿಸುತ್ತಿರುವ ನಾಲ್ಕನೇ ಚಿತ್ರ. ಹಿಂದಿನ ಮೂರು ಚಿತ್ರಗಳೇ ಬೇರೆ ತರಹ., ಇದೇ ಬೇರೆ ತರಹ. ನಾನು ಹೇಗೆ ಇದ್ದೆನೋ ಅದೇ ತರಹದ ಪಾತ್ರ ಎನ್ನಬಹುದು. ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಇದು ಹಳ್ಳಿಯಿಂದ ಸಿಟಿಗೆ ಬಂದ ಹುಡುಗನ ಕಥೆಯಲ್ಲ. ಹಳ್ಳಿಯನ್ನೇ ಸಿಟಿ ಮಾಡಲು ಹೊರಟ ಹುಡುಗನ ಕಥೆ. ಹರಿ ಸಂತೋಷ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ'' ಎಂದರು.
'Congratulations ಬ್ರದರ್' ಚಿತ್ರ ತಂಡ ಹೇಳಿದ್ದೇನು?:ಬಳಿಕ 'CONGRATULATIONS ಬ್ರದರ್' ಚಿತ್ರದ ಕಥೆಗಾರ ಹಾಗೂ ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ಮಾತನಾಡಿ, ''ಎರಡು ವರ್ಷಗಳಿಂದ ನಾವು 12 ಜನ ಸ್ನೇಹಿತರು ಸೇರಿ 'ಪೆನ್ ಎನ್ ಪೇಪರ್' ಸಂಸ್ಥೆ ಆರಂಭಿಸಿದ್ದೆವು. ಈ ಮೂಲಕ ಹಲವು ವೆಬ್ ಸಿರೀಸ್ಗಳಿಗೆ ಹಾಗೂ ಕೆಲವು ಪ್ರೊಡಕ್ಷನ್ ಹೌಸ್ಗಳಿಗೆ ಕಥೆ ಒದಗಿಸಿಕೊಟ್ಟಿದ್ದೇವೆ. ಈಗ ಇದೇ ತಂಡದಿಂದ ಮೊದಲ ಸಿನಿಮಾ ಮಾಡುತ್ತಿದ್ದೇವೆ. ಅದೇ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ ಚಿತ್ರ 'CONGRATULATIONS ಬ್ರದರ್'. ಇದಕ್ಕೆ ಕಥೆ ಬರೆಯಲು ಒಂದು ವರ್ಷವಾಯಿತು. ಮಾರ್ನಿಂಗ್ ಶೋ ಆಡಿಯನ್ಸ್ನ ತಲೆಯಲ್ಲಿಟ್ಟಿಕೊಂಡು ಕಥೆ ಮಾಡಿದ್ದೇವೆ. ನನ್ನ ತಂಡದಲ್ಲಿರುವ ಪ್ರತಾಪ್ ಗಂಧರ್ವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ'' ಎಂದರು.