ನವದೆಹಲಿ: ಮೂರು ವಾರಗಳಿಂದ ಆಧಾರ್ ಕಾರ್ಡ್ ಪಡೆಯಲು ಮಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಫಿಲ್ಮ್ಮೇಕರ್ ಹನ್ಸಲ್ ಮೆಹ್ತಾ ಅಸಮಧಾನ ಹೊರಹಾಕಿದ್ದಾರೆ. ಇಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿ, ಅದನ್ನು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI)ಗೆ ಟ್ಯಾಗ್ ಮಾಡಿದ್ದಾರೆ. ಮಗಳು ಎದುರಿಸಿದ ಸವಾಲುಗಳನ್ನು ಎತ್ತಿ ಹಿಡಿದಿದ್ದಾರೆ. ಆಧಾರ್ ಕೇಂದ್ರದಲ್ಲಿ ಮಗಳಿಗೆ ಸಿಕ್ಕ ಟ್ರೀಟ್ಮೆಂಟ್ (ಅಧಿಕಾರಿಗಳ ವರ್ತನೆ) 'ಕಿರುಕುಳ'ದಂತಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು ಆರೋಪಿಸಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಹನ್ಸಲ್ ಮೆಹ್ತಾ ಅವರು ತಮ್ಮ ಮಗಳ ಅನುಭವವನ್ನು ವಿವರಿಸಿದ್ದಾರೆ. "ನನ್ನ ಮಗಳು ಕಳೆದ 3 ವಾರಗಳಿಂದ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದಾಳೆ. ಅವಳು ಅಂಧೇರಿ ಪೂರ್ವದಲ್ಲಿರುವ ಆಧಾರ್ ಕೇಂದ್ರಕ್ಕೆ ಹೋಗಿ ಬರುತ್ತಿದ್ದಾಳೆ. ಭಾರಿ ಮಳೆಯ ನಡುವೆಯೂ ಕೇಂದ್ರಕ್ಕೆ ಬೇಗನೆ ತಲುಪುತ್ತಾಳೆ. ಆದ್ರೆ ಸೀನಿಯರ್ ಮ್ಯಾನೇಜರ್ ಯಾವುದಾದರೊಂದು ನೆಪದಲ್ಲಿ ಆಕೆಯನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇದಕ್ಕೆ ಸಹಿ ಮಾಡಿ, ಈ ಡಾಕ್ಯುಮೆಂಟ್ ಪಡೆಯಿರಿ, ಸ್ಟಾಂಪ್ ಸರಿಯಾಗಿಲ್ಲ, ನಿಮಗೆ ಇಂದು ಅಪಾಯಿಂಟ್‌ಮೆಂಟ್ ಇಲ್ಲ, ನಾನು ಒಂದು ವಾರ ರಜೆಯಲ್ಲಿದ್ದೇನೆ - ಹೀಗೆ ನಾನಾ ಕಾರಣಗಳನ್ನು ಕೊಡುತ್ತಿದ್ದಾರೆ. ಫ್ರಸ್ಟ್ರೇಶನ್ ಮಾತ್ರವಲ್ಲ, ಇದು ಯಾವುದೇ 'ಕಿರುಕುಳ'ಕ್ಕಿಂತ ಕಡಿಮೆ ಇಲ್ಲ" ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದು @ceo_uidai ಮತ್ತು @UIDAI ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ.
ಕೆಲ ಹೊತ್ತಿನಲ್ಲೇ 'UIDAI'ನ ಅಧಿಕೃತ ಎಕ್ಸ್ ಖಾತೆ ಹನ್ಸಲ್ ಮೆಹ್ತಾರಿಗೆ ಪ್ರತಿಕ್ರಿಯಿಸಿದೆ. "ಆತ್ಮೀಯ ಆಧಾರ್ ನಂಬರ್ ಹೋಲ್ಡರ್, ದಯವಿಟ್ಟು ಈ ಸಮಸ್ಯೆಯನ್ನು ಎದುರಿಸುತ್ತಿರುವ ಆಧಾರ್ ಕೇಂದ್ರದ ಸಂಪೂರ್ಣ ವಿಳಾಸವನ್ನು ನಿಮ್ಮ ಸಂಪರ್ಕ ವಿವರಗಳೊಂದಿಗೆ ನೇರ ಸಂದೇಶದ ಮೂಲಕ ಹಂಚಿಕೊಳ್ಳಿ. ನಾವು ನಿಮಗೆ ಹೆಚ್ಚಿನ ಸಹಾಯ ಮಾಡುತ್ತೇವೆ. @ceo_uidai @UIDAI" ಎಂದು ಬರೆದುಕೊಂಡಿದೆ.
ಚಿತ್ರರಂಗದ ಖ್ಯಾತನಾಮರ ಈ ಟ್ವೀಟ್ ಆನ್‌ಲೈನ್‌ನಲ್ಲಿ ಸದ್ದು ಮಾಡಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ತಮ್ಮ ಅಭಿಪ್ರಾಯ ಮತ್ತು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರೋರ್ವರು ಮೆಹ್ತಾ ಅವರ ಸೀರಿಸ್ 'ಸ್ಕ್ಯಾಮ್ 1992' ಅನ್ನು ಉಲ್ಲೇಖಿಸಿ, "ಅವರು ದಾಖಲೆಗಳನ್ನು ಅನುಸರಿಸುವ ಅಗತ್ಯವಿದೆ. ಇಲ್ಲಿ ಯಾವುದೇ ಹಗರಣವಿಲ್ಲ, ಮೆಹ್ತಾ ಜೀ" ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕರು, "ನಿಜವಾಗಿಯೂ? ಈ ಬುಲ್ಶಿಟ್ ಅನ್ನು ನಿಲ್ಲಿಸಿ'' ಎಂದು ತಿಳಿಸಿದ್ದಾರೆ.