ಒಂದು ಸಿನಿಮಾ ಯಾವೆಲ್ಲಾ ಆ್ಯಂಗಲ್ಗಳಿಂದ ಸದ್ದು - ಸುದ್ದಿ ಅಗಬೇಕೋ ಅವೆಲ್ಲಾ ಆ್ಯಂಗಲ್ಗಳಿಂದ ''ಒನ್ ಅಂಡ್ ಅ ಹಾಫ್'' ಸಿನಿಮಾ ಸುದ್ದಿಯಾಗುತ್ತಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಎರಡನೇ ಹಾಡು ಇತ್ತೀಚೆಗೆ ಅನಾವರಣಗೊಂಡಿದೆ. 'ಹೇ ನಿಧಿ' ಎಂಬ ಮೊದಲ ಗೀತೆ ಹಿಟ್ ಲಿಸ್ಟ್ ಸೇರಿರುವ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಹಾಡಿನ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿದೆ.
ರಂಗ್ಬಿರಂಗಿ, ಡೆವಿಡ್, ದಿ ವೆಕೆಂಟ್ ಹೌಸ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಯುವ ಪ್ರತಿಭೆ ಶ್ರೇಯಶ್ ಸೂರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಒನ್ ಅಂಡ್ ಅ ಹಾಫ್ ಚಿತ್ರದ ಹ್ಯಾಂಡಲ್ ವಿತ್ ಕೇರ್ ಎಂಬ ಸಾಂಗ್ ರಿಲೀಸ್ ಮಾಡಲಾಗಿದೆ. ಚಿತ್ರದ ನಾಯಕ ಹಾಗೂ ನಿರ್ದೇಶಕ ಶ್ರೇಯಶ್ ಸೂರಿ ಹುಟ್ಟುಹಬ್ಬದ ವಿಶೇಷವಾಗಿ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ನಡೆದ ಈವೆಂಟ್ನಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಇದೇ ವೇಳೆ ನಟಿ ಮಾನ್ವಿತಾ ಹರೀಶ್ ಮಾತನಾಡಿ, ಸಿನಿಮಾ ಇಂಡಸ್ಟ್ರಿಗೆ ಆಕಸ್ಮಿಕವಾಗಿ ಎಂಟ್ರಿ ಕೊಟ್ಟೆ. ಈವರೆಗೆ ಪ್ರತೀ ಸಿನಿಮಾದಲ್ಲೂ ತುಂಬಾನೇ ಪ್ರೀತಿ ಕೊಟ್ಟಿದ್ದೀರ. ಮೊದಲ 3 ಸಿನಿಮಾಗಳಲ್ಲಿ 125 ದಿನದ ಬೋರ್ಡ್ ನಿಮ್ಮ ಕಡೆಯಿಂದ ಬಂದಿದೆ. ಅದೇ ರೀತಿ ಒನ್ ಅಂಡ್ ಅ ಹಾಫ್ ಸಿನಿಮಾಗೆ 125 ದಿನ ಅಲ್ಲ, 150 ದಿನದ ಬೋರ್ಡ್ ಬರಲಿ. ನಿಮ್ಮ ಸಹಕಾರವಿಲ್ಲದೇ ಏನೂ ಆಗಲ್ಲ. ಈ ಚಿತ್ರ ನನಗೆ ಬಹಳ ಸ್ಪೆಷಲ್. ಶ್ರೇಯಸ್ ಹುಟ್ಟುಹಬ್ಬ. ಅವರಿಗೆ ಒಳ್ಳೆಯದಾಗಲಿದೆ. ಅವರು ಚಿತ್ರವನ್ನು ನಿರ್ದೇಶನ ಮಾಡುವುದಲ್ಲದೇ, ನಟಿಸುತ್ತಿದ್ದಾರೆ. ಅವರ ತಂದೆ ಹೆಸರು ಸೂರಿ. ನನ್ನ ಗಾಢ್ ಫಾದರ್ ಹೆಸರು ಸೂರಿ. ಆ ಲಕ್ ಫ್ಯಾಕ್ಟರ್ ಕೂಡಾ ಈ ಚಿತ್ರದಲ್ಲಿ ವರ್ಕ್ ಆಗಲಿ ಎಂದು ತಿಳಿಸಿದರು.
ನಟ ಕಂ ನಿರ್ದೇಶಕ ಶ್ರೇಯಶ್ ಸೂರಿ ಮಾತನಾಡಿ, ಈ ಸಿನಿಮಾ ನನ್ನಿಂದ ಅಲ್ಲ. ಇಡೀ ತಂಡದ ಕೆಲಸ. ಈ ಚಿತ್ರದ ನನ್ನದಲ್ಲ. ನಮ್ಮೆಲ್ಲರದ್ದು, ರಿಲೀಸ್ ಆದ ಮೇಲೆ ನಿಮ್ಮೆಲ್ಲರದ್ದು. ಎಲ್ಲಿ ತನಕ ಕರೆದುಕೊಂಡು ಹೋಗುತ್ತೀರಾ? ಎಷ್ಟು ಮುಂದೆ ಹೋಗುತ್ತೀರಾ? ಅಷ್ಟೇ ಚೆನ್ನಾಗಿ ಬೆಳೆಯುತ್ತಾ ಬೆಳೆಯುತ್ತಾ ಒಳ್ಳೆ ಸಿನಿಮಾ ಮಾಡುತ್ತೇವೆ ಎಂದರು.