ಕರ್ನಾಟಕ

karnataka

ETV Bharat / entertainment

'ರೇಷ್ಮೆ ಬೆಳೆಗಾರನಾಗಿ ಅಭಿನಯಿಸಿರೋದು ಖುಷಿ ಕೊಟ್ಟಿದೆ': ಸಂಜು ವೆಡ್ಸ್ ಗೀತಾ 2 ನಟ ಶ್ರೀನಗರ ಕಿಟ್ಟಿ - Habibi song - HABIBI SONG

ಬಹುನಿರೀಕ್ಷಿತ ಚಿತ್ರ ''ಸಂಜು ವೆಡ್ಸ್ ಗೀತಾ 2'' ಚಿತ್ರದ 'ಹಬೀಬಿ' ಹಾಡು ಅನಾವರಣಗೊಂಡಿದೆ.

Sanju Weds Geetha 2 event
ಸಂಜು ವೆಡ್ಸ್ ಗೀತಾ 2 ಈವೆಂಟ್​​ (ETV Bharat)

By ETV Bharat Karnataka Team

Published : Oct 7, 2024, 3:44 PM IST

ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಕನ್ನಡದ ಬಹುನಿರೀಕ್ಷಿತ ಚಿತ್ರ ''ಸಂಜು ವೆಡ್ಸ್ ಗೀತಾ 2''. ಕಥೆ ಮತ್ತು ಸ್ಟಾರ್ ಕಾಸ್ಟ್ ಸಲುವಾಗಿ ಸದ್ದು ಮಾಡುತ್ತಿರುವ 'ಸಂಜು ವೆಡ್ಸ್ ಗೀತಾ 2'ರ ಸಾಂಗ್​ ರಿಲೀಸ್​ ಈವೆಂಟ್​​ ಇತ್ತೀಚೆಗಷ್ಟೇ ನಡೆಯಿತು. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅಭಿನಯದ ಈ 'ಹಬೀಬಿ' ಹಾಡನ್ನು ಛಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಅನಾವರಣಗೊಳಿಸಿದ್ರು. ಜೊತೆಗೆ, ಬಸನಾಗಿ ಸ್ವಾಮೀಜಿ ಕೂಡಾ ಉಪಸ್ಥಿತರಿದ್ದರು.

ಛಲವಾದಿ ಮಹಾಸಭಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಹೋದರ ಕುಮಾರ್ ಅವರೀಗ ಸಿನಿರಂಗದಲ್ಲಿ ನಿರ್ಮಾಪಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತುಂಬಾನೇ ಖರ್ಚು ಮಾಡಿ ಬಹಳ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೇ ನಮ್ಮವರೇ ಆದ ನಾಗಶೇಖರ್ ಅವರು ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಮಾಜದ ನ್ಯೂನತೆಗಳನ್ನು ತೊಡೆದು ಹಾಕೋ ಕೆಲಸವನ್ನು ನಮ್ಮ ಸಿನಿಮಾಗಳು ಮಾಡಲಿ, ಈ ಚಿತ್ರವು ಅತ್ಯಂತ ಯಶಸ್ವಿಯಾಗಲಿ ಎಂದು ಹಾರೈಸಿದರು.

ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿರುವ ನಿರ್ದೇಶಕ ನಾಗಶೇಖರ್ ಮಾತನಾಡಿ, ಶಿಡ್ಲಘಟ್ಟದಿಂದ ಸ್ವಿಟ್ಜರ್​ಲ್ಯಾಂಡ್ ಹೀಗೆ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಇದೀಗ ದೊಡ್ಡ ವೇದಿಕೆಯಲ್ಲಿ ನಮ್ಮ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರವೀಗ ರಿರೆಕಾರ್ಡಿಂಗ್ ಹಂತದಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರದ ಫಸ್ಟ್ ಕಾಪಿ ಹೊರಬರಲಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡಲು ನಾವಂತೂ ರೆಡಿ ಇದ್ದೇವೆ. ಚಿತ್ರದಲ್ಲಿ 5 ಹಾಡುಗಳಿದ್ದು, ಒಂದು ಹಾಡಿಗೆ ಲಹರಿ ಸಂಸ್ಥೆಯ ಅನುಮತಿ ಬೇಕಿದೆ. ನಮ್ಮ ಮಣ್ಣಿನ ಕಥೆ ಮಾಡಲು ಹೊರಟಾಗ ಶಿಡ್ಲಘಟ್ಟದಲ್ಲಿ ರೈತರು ಎದುರಿಸುತ್ತಿರೋ ಸಮಸ್ಯೆ ಕಣ್ಣಮುಂದೆ ಬಂತು. ಅಲ್ಲಿನ ಕಪ್ಪುಮಣ್ಣಿನ ಕಥೆಯನ್ನು ಚಿತ್ರದಲ್ಲಿ ಹೇಳಹೊರಟಿದ್ದೇವೆ. ಇದರಲ್ಲಿ ಎಲ್ಲವೂ ಹೊಸದಾಗಿರುತ್ತವೆ. ನಿರ್ಮಾಪಕ ಕುಮಾರ್ ಅವರು ನೀಡಿದ ಸಹಕಾರದಿಂದ ಚಿತ್ರ ಇಷ್ಟು ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಈಗಿನ ಕಾಲದ ಲವ್‌ಸ್ಟೋರಿ ಜೊತೆಗೆ ಒಂದು ಸರ್‌ ಪ್ರೈಸ್ ಕೂಡಾ ಚಿತ್ರದಲ್ಲಿರಲಿದೆ ಎಂದು ತಿಳಿಸಿದರು.

ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ, ಮೊದಲ ಬಾರಿಗೆ ಒಬ್ಬ ರೇಶ್ಮೆ ಬೆಳೆಗಾರನಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಈ ಬಗ್ಗೆ ಖುಷಿ ಕೊಟ್ಟಿದೆ. ಮೊದಲ ಹಾಡು ಅನಾವರಣಗೊಂಡಿದೆ. ನಾಗಶೇಖರ್ ಅವರ ಪ್ಯಾಟ್ರನ್ ಅಲ್ಲದೇ ಇರುವ ಈ ಹಾಡಲ್ಲಿ ನಾನು, ರಚಿತಾ ರಾಮ್, ರಾಗಿಣಿ ದ್ವಿವೇದಿ ಅಭಿನಯಿಸಿದ್ದೇವೆ. ರಾಜ್ಯಾದ್ಯಂತ ಆಗಮಿಸಿರುವ ನಾಯಕರೆಲ್ಲರ ಸಮ್ಮುಖದಲ್ಲಿ ಈ ಹಾಡನ್ನು ರಿಲೀಸ್ ಮಾಡಿದ್ದೇವೆ ಎಂದು ಹೇಳಿದರು.

ಸಂಜು ವೆಡ್ಸ್ ಗೀತಾ 2 ಈವೆಂಟ್​​ (ETV Bharat)

ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ, ವಿಭಿನ್ನ ಪ್ಯಾಟ್ರನ್‌ನಲ್ಲಿ ಮೂಡಿಬಂದಿರುವ, ರಾಗಿಣಿ ಅಭಿನಯದ ಈ ಹಾಡನ್ನು ನಮ್ಮ ನಾರಾಯಣಸ್ವಾಮಿ ಅವರ ಕೈಯಲ್ಲೇ ರಿಲೀಸ್ ಮಾಡಿಸಬೇಕೆಂದಿತ್ತು. ಹಾಡು ಅದ್ಭುತವಾಗಿ ಮೂಡಿಬಂದಿದೆ. ಇದು ಅಪ್ಪಟ ಪ್ಯಾಮಿಲಿ ಸ್ಟೋರಿ. ಡಾ.ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೆನಪಿಸುತ್ತದೆ. ರಚಿತಾ ರಾಮ್, ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ದೊಡ್ಡ ದೊಡ್ಡ ಕಲಾವಿದರೇ ಅಭಿನಯಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಶೈನ್ ಶೆಟ್ಟಿ 'ಜಸ್ಟ್ ಮ್ಯಾರಿಡ್' ಅಂದ್ರು ರಿಯಲ್ ಸ್ಟಾರ್ ಉಪೇಂದ್ರ - Just Married

ನಾಗಶೇಖರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ಅವರ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರೂಪಿಸಿದ್ದಾರೆ. ಒಬ್ಬ ರೇಶ್ಮೆ ಬೆಳೆಗಾರನಾಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಇವರ ಜೊತೆ ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೇ ಖಳನಟ ಸಂಪತ್‌ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಬಿಗ್​​ ಬಾಸ್​​ನಿಂದ ಯಮುನಾ ಔಟ್; ಮನೆಯಲ್ಲಿ ಮತ್ತೆ ಕಿರುಚಾಟ: ನಿಮ್ಮ ಅಭಿಪ್ರಾಯವೇನು? - Bigg Boss Kannada 11

ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನವಿದೆ. ಪವಿತ್ರಾ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅದ್ದೂರಿಯಾಗಿ ನಿರ್ಮಾಣ‌ ಮಾಡಿದ್ದಾರೆ. ಸದ್ಯ ಹಾಡಿನಿಂದಲೇ ಸಖತ್​ ಸದ್ದು ಮಾಡುತ್ತಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

ABOUT THE AUTHOR

...view details