ಚಿತ್ರಮಂದಿರಗಳಲ್ಲಿ ಶತದಿನಗಳ ಕಾಲ ಓಡಿರುವ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ ಹೊಸ ಚಿತ್ರವಿಂದು ಅಧಿಕೃತವಾಗಿ ಘೋಷಣೆಯಾಗಿದೆ. ಮ್ಯೂಸಿಕಲ್ ಲವ್ ಸ್ಟೋರಿ ಕೃಷ್ಣಂ ಪ್ರಣಯ ಸಖಿ ಸ್ಯಾಂಡಲ್ವುಡ್ ಗಣಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು. ಇದರ ಬೆನ್ನಲ್ಲೇ ಲವರ್ ಬಾಯ್ ಮತ್ತೊಂದು ಕುತೂಹಲಕಾರಿ ಮತ್ತು ಬಿಗ್ ಬಜೆಟ್ ಪ್ರಾಜೆಕ್ಟ್ನೊಂದಿಗೆ ಮರಳಲು ಸಜ್ಜಾಗಿದ್ದಾರೆ. ಚಿತ್ರದ ಶೀರ್ಷಿಕೆ 'ಪಿನಾಕ'.
ಇತ್ತೀಚೆಗಷ್ಟೇ ಟಾಲಿವುಡ್ನಲ್ಲಿ ಹೆಸರು ಮಾಡಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಪೀಪಲ್ ಮೀಡಿಯಾ ಫ್ಯಾಕ್ಟರಿ'ಯು ಚಂದನವನದ ಬಹುಬೇಡಿಕೆ ನಟನೊಂದಿಗೆ ಸಿನಿಮಾ ಮಾಡುತ್ತಿದ್ದೇವೆ ಅಂತಾ ಘೋಷಿಸಿತ್ತು. ಕಳೆದ ಎರಡ್ಮೂರು ದಿನಗಳಲ್ಲಿ ಪೋಸ್ಟರ್ಸ್ ಅನಾವರಣಗೊಳಿಸಿ, ಟೈಟಲ್ ಟೀಸರ್ ಬಿಡುಗಡೆ ದಿನಾಂಕವನ್ನೂ ಘೋಷಿಸಿತ್ತು. ನಿಗದಿಯಂತೆ ಇಂದು ಗಣೇಶ್ ಅವರ ಹೊಸ ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಬಿಡುಗಡೆ ಆಗಿದೆ.
ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ: ಪಿನಾಕ ಟೈಟಲ್ ಟೀಸರ್, ಇದು ಕಾಲಗರ್ಭದ ಕೂಗು ಎಂಬ ಗಣೇಶ್ ಅವರ ಹಿನ್ನೆಲೆ ದನಿಯೊಂದಿಗೆ ಪ್ರಾರಂಭವಾಗಿದೆ. ಚರಿತ್ರೆಯ ಎದೆ ಸೀಳಿ, ವರ್ತಮಾನದ ಕಿವಿಗಪ್ಪಳಿಸಿದ ಘರ್ಜನೆ. ಯಾರೋ ಹೆಣೆದ ಕಟ್ಟುಕಥೆಯಲ್ಲ. ಜನರಿಗಾಗಿ ಬದುಕಿದ ವೀರನ ದಂತಕಥೆ. ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ. ಭೂತ, ಪ್ರೇತ, ಪಿಶಾಚಿಗಳ ಹಸಿವ ನೀಗಿಸೋ ಮಾರಣಹೋಮ. ಸೃಷ್ಟಿ, ಸಮಷ್ಠಿಯನ್ನೇ ನಡುಗಿಸೋ ಕ್ರೂರ ಸಂಗ್ರಾಮ. ವಿನಾತನ ವಿಧಿಬರಹವನ್ನೇ ಚದುರಿಸೋ ಕ್ಷುದ್ರ ಮಂತ್ರ. ಪಂಚಭೂತಗಳು ತರ, ತರ, ತರ.. ತತ್ತರ ಎಂಬ ಗಣೇಶ್ ಡೈಲಾಗ್ ಮತ್ತು ಹಿನ್ನೆಲೆ ದೃಶ್ಯ ಮೈಜುಂ ಎನಿಸುವಂತಿದೆ. 2 ನಿಮಿಷ 54 ಸೆಕೆಂಡುಗಳುಳ್ಳ ಟೀಸರ್ ಸಿನಿಮಾ ಕಥೆ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.
ಟೈಟಲ್ ಟೀಸರ್ ಬಗ್ಗೆ ಪೋಸ್ಟರ್ ಹಂಚಿಕೊಂಡಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ, ಇದು ಕ್ಷುದ್ರ ಶಕ್ತಿ ಮತ್ತು ರುದ್ರ ಶಕ್ತಿ ನಡುವಿನ ಮಹಾ ಸಮರ. 'PMF49' ಪಿನಾಕ. ಹೊಸ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್. ಧನಂಜಯ ನಿರ್ದೇಶನದ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿ ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದೆ.