2024ರ ಹಿಟ್ ಚಿತ್ರಗಳಲ್ಲೊಂದಾದ 'ಕೃಷ್ಣಂ ಪ್ರಣಯ ಸಖಿ' ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯಲ್ಲಿ ಬರುತ್ತಿರುವ ನೂತನ ಚಿತ್ರದ ಶೀರ್ಷಿಕೆ ಕಳೆದ ದಿನವಷ್ಟೇ ಅನಾವರಣಗೊಂಡಿದೆ. ಬಹುನಿರೀಕ್ಷಿತ ಚಿತ್ರಕ್ಕೆ 'ಪಿನಾಕ' ಎಂದು ಹೆಸರಿಡಲಾಗಿದ್ದು, ಟೈಟಲ್ ಟೀಸರ್ ಕೂಡಾ ಬಹಿರಂಗಗೊಂಡಿದೆ.
ನೃತ್ಯ ನಿರ್ದೇಶಕನ ಚೊಚ್ಚಲ ಚಿತ್ರ: ಈಗಾಗಲೇ ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ 48 ಚಿತ್ರಗಳನ್ನು ನಿರ್ಮಿಸಿರುವ ಟಿ.ಜಿ.ವಿಶ್ವಪ್ರಸಾದ್ ಸಾರಥ್ಯದ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿರುವ 49ನೇ ಚಿತ್ರ ಇದಾಗಿದೆ. ನೃತ್ಯ ನಿರ್ದೇಶಕನಾಗಿ ಜನಪ್ರಿಯರಾಗಿರುವ ಧನಂಜಯ ಮೊದಲ ಬಾರಿಗೆ ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಗಣಿ:ಗೋಲ್ಡನ್ ಸ್ಟಾರ್ ಈವರೆಗೂ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರತಂಡದಿಂದ ಹೊರಬಿದ್ದಿರುವ ಟೈಟಲ್ ಟೀಸರ್ನಲ್ಲಿ ಮೈನವಿರೇಳಿಸುವ ದೃಶ್ಯಗಳಿದ್ದು, ಹಿನ್ನೆಲೆ ಸಂಗೀತ ಕೂಡಾ ಪ್ರೇಕ್ಷಕರ ಗಮನ ಸೆಳೆದಿದೆ. ಗಣೇಶ್ ವೃತ್ತಿಜೀವನಕ್ಕೆ ಹೊಸ ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಈ ಟೀಸರ್ನಲ್ಲಿ ಸಿಕ್ಕಿದೆ.
ರೊಮ್ಯಾನ್ಸ್ನಿಂದ ರೌದ್ರಾವತಾರಕ್ಕೆ: ಟೀಸರ್ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ನಾಯಕ ನಟ ಗಣೇಶ್, "ಸಾಮಾನ್ಯವಾಗಿ ಎಲ್ಲರೂ ತಮ್ಮ ಚಿತ್ರದ ಬಗ್ಗೆ ಮಾತನಾಡುವಾಗಿ ವಿಭಿನ್ನವಾಗಿ ಮಾಡಿದ್ದೇವೆ ಎನ್ನುತ್ತಾರೆ. ಆದ್ರೆ ನಾವು ನಿಜವಾಗಿಯೂ ಸಖತ್ ಡಿಫರೆಂಟ್ ಆಗಿ ಮಾಡಿದ್ದೇವೆ. ಉತ್ತಮ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಾದ ವಿಶ್ವಪ್ರಸಾದ್ ಹಾಗೂ ವಂದನ ಅವರಿಗೆ ಧನ್ಯವಾದಗಳು. ಹುಡುಗಾಟ ಚಿತ್ರದಿಂದ ನಾನು ಧನಂಜಯ ಅವರನ್ನು ಬಲ್ಲೆ. ಇಂದು ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕ ಧನಂಜಯ, ನಿರ್ಮಾಪಕರ ಸಹೋದರಿ ವಿಜಯ ಹಾಗೂ ಅವರ ತಂಡದವರು ಕಳೆದ ಒಂದು ವರ್ಷದಿಂದ ಅಡ್ವೆಂಚರ್, ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಒಂದೊಳ್ಳೆ ಕಥೆಯನ್ನು ಮಾಡಿದ್ದಾರೆ. ಈಗ ಕಥೆಯಷ್ಟೇ ಚಂದದ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ. ನಾನು ಚಿತ್ರರಂಗಕ್ಕೆ ವಿಲನ್ ಪಾತ್ರದ ಮೂಲಕ ಪ್ರವೇಶ ನೀಡಿದ್ದು, ಮುಂಗಾರು ಮಳೆ ಚಿತ್ರದ ನಂತರ ನನ್ನನ್ನು ರೊಮ್ಯಾಂಟಿಕ್ ಹೀರೋ ಆಗಿಯೇ ನೋಡಲು ಅಭಿಮಾನಿಗಳು ಬಯಸಿದರು. ಈ ಪಿನಾಕ ಮೂಲಕ ನನ್ನ ಹಿಂದಿನ ಜಾನರನ್ನು ಬದಲಿಸಿಕೊಂಡಿದ್ದೇನೆ. ಈವರೆಗೂ ನಿರ್ವಹಿಸದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಪಿನಾಕ ಮೂಡಿ ಬರಲಿದೆ" ಎಂದರು.