ಸೌತ್ ಸೂಪರ್ಸ್ಟಾರ್ ದಳಪತಿ ವಿಜಯ್ ತಮ್ಮ ಮುಂದಿನ ಬಹುನಿರಿಕ್ಷಿತ ಚಿತ್ರ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಮೂಲಕ ಅಭಿಮಾನಿಗಳನ್ನು ಮನರಂಜಿಸಲು ಸಜ್ಜಾಗುತ್ತಿದ್ದಾರೆ. ಗೋಟ್ (GAOT) ಎಂದೂ ಕರೆಯಲ್ಪಡುವ ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿದೆ.
ಬಹುನಿರೀಕ್ಷಿತ ಪ್ರೊಜೆಕ್ಟ್ನ ಲೇಟೆಸ್ಟ್ ಇಂಟ್ರೆಸ್ಟಿಂಗ್ ಸುದ್ದಿಯೆಂದರೆ, ಚಿತ್ರತಂಡ ಯುಎಸ್ಎನಲ್ಲಿ ಶೂಟಿಂಗ್ ಶೆಡ್ಯೂಲ್ ಶುರು ಮಾಡಿದೆ. ಅಷ್ಟೇ ಅಲ್ಲ, ಹಿಂದಿರುಗಿದ ನಂತರ ವಿಜಯ್ ತಮಿಳುನಾಡಿನಲ್ಲಿ 10ನೇ ಮತ್ತು 12ನೇ ತರಗತಿಯ ಟಾಪರ್ಗಳನ್ನು ಭೇಟಿಯಾಗಲಿದ್ದಾರೆ.
ವೈರಲ್ ವಿಡಿಯೋದಲ್ಲಿ, ವಿಜಯ್ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳು ಶೇರ್ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ್ಯಕ್ಷನ್ ಪ್ಯಾಕ್ಡ್ ಸೈನ್ಸ್ ಫಿಕ್ಷನ್ ಡ್ರಾಮಾದಲ್ಲಿ ನಟ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಅವರ ಕಿರಿಯ ಪಾತ್ರ ತೋರಿಸಲು ಚಿತ್ರತಂಡ ಅತ್ಯಾಧುನಿಕ ಡಿ-ಏಜಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳುಲಿದೆ ಎಂದು ವರದಿಗಳು ಸೂಚಿಸಿದೆ. ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ವಿಜಯ್ ಈಗಾಗಲೇ ಒಂದಷ್ಟು ಡಬ್ಬಿಂಗ್ ಕೆಲಸವನ್ನೂ ಪೂರ್ಣಗೊಳಿಸಿದ್ದಾರೆ.
ಗೋಟ್ ಅಪ್ಡೇಟ್ಸ್ ಪ್ರಕಾರ, ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಊಹಾಪೋಹವಿದೆ. ನಿರ್ಮಾಪಕರು ಇತ್ತೀಚೆಗೆ ಚಿತ್ರದ ವಿಸಿಲ್ ಪೋಡು ಆಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿದ್ದಾರೆ. ಮೊದಲ ಹಾಡು ಆನ್ಲೈನ್ನಲ್ಲಿ ಸದ್ದು ಮಾಡುತ್ತಿದ್ದು, ಚಿತ್ರದಿಂದ ಎರಡನೇ ಹಾಡು ಜೂನ್ನಲ್ಲಿ ಬಿಡುಗಡೆಯಾಗಲಿದೆ ಎಂದು ವೆಂಕಟ್ ಪ್ರಭು ಸುಳಿವು ನೀಡಿದ್ದಾರೆ.