1978ರಲ್ಲಿ ಬಿಡುಗಡೆಯಾಗಿ ಕನ್ನಡದ ಹೊಸ ಅಲೆಯ ಚಿತ್ರಗಳಲ್ಲಿ ಹೊಸ ಸಂಚಲನ ಮೂಡಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದ ಚಿತ್ರ 'ಘಟಶ್ರಾದ್ಧ'. ಆ ವರ್ಷ ರಾಷ್ಟ್ರ್ರ ಪ್ರಶಸ್ತಿ ಸ್ಪರ್ಧೆಯಲ್ಲಿದ್ದ ಘಟಾನುಘಟಿ ಚಿತ್ರನಿರ್ದೇಶಕರಾದ ಸತ್ಯಜಿತ್ ರೇ, ಮೃಣಾಲ್ ಸೆನ್, ಶ್ಯಾಮ್ ಬೆನೆಗಲ್, ಅಡೂರ್ ಗೋಪಾಲಕೃಷ್ಣನ್, ಅರವಿಂದನ್, ಜಾನ್ ಅಬ್ರಹಾಂ ಅವರ ಚಿತ್ರಗಳ ಜೊತೆ ಸ್ಪರ್ಧಿಸಿ ಸ್ವರ್ಣಪದಕ ಪಡೆದ ಈ ಚಿತ್ರ ಗಿರೀಶ್ ಕಾಸರವಳ್ಳಿಯವರ ಪ್ರಥಮ ಚಿತ್ರವೂ ಹೌದು.
ಗಿರೀಶ್ ಕಾಸರವಳ್ಳಿ ಅವರಿಗೆ ಕೇವಲ 26 ವರ್ಷವಾಗಿದ್ದಾಗ ನಿರ್ದೇಶಿಸಿದ ಈ ಚಿತ್ರವು ಅದರ ವಸ್ತುವಿಗೆ, ದೃಶ್ಯ ಸೌಷ್ಠವಕ್ಕೆ, ಸಿನಿಮಾತ್ಮಕ ಶಕ್ತಿಗಾಗಿ ಸ್ವತಃ, ರೇ, ಸೆನ್, ಅಡೂರ್ ಅವರಿಂದ ಪ್ರಶಂಸಿಸಲ್ಪಟ್ಟಿತ್ತು.
ಇದರ ಜೊತೆಗೆ ಕೇಂದ್ರ ಸರ್ಕಾರದ ಸಂಸ್ಥೆಯಾದ ಚಲನಚಿತ್ರ ನಿರ್ದೇಶನಾಲಯ 2009ರಲ್ಲಿ ಸಿನಿಮಾದ ಶತಮಾನೋತ್ಸವದ ನೆನಪಿಗಾಗಿ 100 ವರ್ಷದ ಸಿನಿಮಾ ಇತಿಹಾಸದಲ್ಲಿ ತಯಾರಾದ 20 ಭಾರತೀಯ ಶ್ರೇಷ್ಠ ಚಿತ್ರಗಳನ್ನು ಆಯ್ಕೆ ಮಾಡಿತ್ತು. ಅವುಗಳಲ್ಲಿ ಘಟಶ್ರಾದ್ಧವೂ ಒಂದು ಎಂದು ಭಾರತೀಯ ಸಿನಿಮಾ ವಿಮರ್ಶಕರು, ನಿರ್ದೇಶಕರು ಆರಿಸಿದ್ದರು. ಈ ಚಿತ್ರ ನೋಡಿ ಮೆಚ್ಚಿದ್ದ ಹಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕರಾದ, ಟ್ಯಾಕ್ಸಿ ಡ್ರೈವರ್, ಡಿಪಾರ್ಟೆಡ್ ಚಿತ್ರ ಖ್ಯಾತಿಯ ಮಾರ್ಟಿನ್ ಸ್ಕಾರ್ಸೆಸ್ಸಿ ಹಾಗೂ ಸ್ಟಾರ್ ವಾರ್ಸ್ ಖ್ಯಾತಿಯ ಜಾರ್ಜ್ ಲ್ಯೂಕಾಸ್ ಈ ಚಿತ್ರದ ಪುನರ್ ರೂಪೀಕರಣಕ್ಕೆ ಮುಂದಾಗಿದ್ದರು. ಸೆಲ್ಯೂಲಾಯ್ದ್ ಮ್ಯಾನ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರ ನಿರ್ದೇಶಕ ಶಿವೇಂದ್ರ ಸಿಂಗ್ ದುಂಗಾರ್‌ಪುರ್ ಅವರ ಸಿನಿಮಾ ಫೌಂಡೇಶನ್ ಇಡೀ ಪುನರ್ ನವೀಕರಣದ ರೂವಾರಿಯಾಗಿದ್ದರು.