ಕನ್ನಡ ಚಿತ್ರರಂಗದ ನಟ, ನಟಿಯರು ಜೊತೆಗೆ ನಿರ್ದೇಶಕ - ನಿರ್ಮಾಪಕರು ಬಹುಭಾಷೆಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸ್ಯಾಂಡಲ್ವುಡ್ನ ಕೀರ್ತಿ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಹರಡಿದೆ. ಇದೀಗ ಈ ಸಾಲಿಗೆ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಹೊಸ ಸೇರ್ಪಡೆ.
ಘುಸ್ಪೈಥಿಯಾ ಟ್ರೇಲರ್ ರಿಲೀಸ್:ಕನ್ನಡದಲ್ಲಿ ಉಪ್ಪು ಹುಳಿ ಖಾರ, ನಾತಿಚರಾಮಿ, ಪಡ್ಡೆಹುಲಿ, 100, ಗಾಳಿಪಟ 2 - ಹೀಗೆ ವಿಭಿನ್ನ ಶೈಲಿಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿರುವ ನಿರ್ಮಾಪಕ ಎಂದರೆ ಅದು ಎಂ. ರಮೇಶ್ ರೆಡ್ಡಿ. ಕನ್ನಡ ಸಿನಿಮಾಗಳ ಜೊತೆ ಜೊತೆಗೆ ಇದೀಗ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. ರಮೇಶ್ ರೆಡ್ಡಿ, ಜ್ಯೋತಿಕ ಶೆಣೈ ಹಾಗೂ ಮಂಜರಿ ಸುಸಿ ಗಣೇಶನ್ ಸೇರಿ ನಿರ್ಮಿಸಿರುವ ಘುಸ್ಪೈಥಿಯಾ (GHUSPAITHIYA) ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ಈ ಚಿತ್ರಕ್ಕೆ ಸುಸಿ ಗಣೇಶನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈವೆಂಟ್ನಲ್ಲಿ ಎಂ. ರಮೇಶ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು.
'ಘುಸ್ಪೈಥಿಯಾ', ಸೈಬರ್ ಕ್ರೈಂ ಕಥಾಹಂದರ ಹೊಂದಿರುವ ಚಿತ್ರ. ತಾವು ಬಂಡವಾಳ ಹೂಡಿರುವ ಸಿನಿಮಾದ ಬಗ್ಗೆ ನಿರ್ಮಾಪಕ ಎಂ ರಮೇಶ್ ರೆಡ್ಡಿ ಅವರು ಮುಂಬೈನ ಈವೆಂಟ್ನಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಗಮನ ಸೆಳೆದರು. ಚಿತ್ರಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಈ ಚಿತ್ರವನ್ನು ಬೆಂಬಲಿಸಿದರೆ ಮತ್ತಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಬಹುದು. ಮುಂದೆ ಕೂಡ ಹಿಂದಿ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭ ವಿನೀತ್ ಕುಮಾರ್ ಸಿಂಗ್, ಊರ್ವಶಿ ರೌಟೇಲಾ, ಅಕ್ಷಯ್ ಒಬೆರಾಯ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.