ಇಂದು ರಾಜ್ಯಾದ್ಯಂತ ಕನ್ನಡದ ಮೇರುನಟ ಡಾ.ರಾಜ್‌ಕುಮಾರ್ ಜನ್ಮದಿನದ ಸಂಭ್ರಮ ಕಳೆಗಟ್ಟಿತ್ತು. ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದಾರೆ. ಕನ್ನಡದ ಕಂಪನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಸರಸ್ವತಿ ಪುತ್ರ ಡಾ.ರಾಜ್‌ಕುಮಾರ್ ಅವರ ಹುಟ್ಟಿದ ದಿನದಂದು ಪುನೀತ್ ರಾಜ್‌ಕುಮಾರ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಈ ಕುರಿತು ಅಶ್ವಿನಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಒದಗಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಕ್ಸ್ ಪೋಸ್ಟ್: ''ಇಂದು ಅಪ್ಪಾಜಿಯವರ 95ನೇ ಜನ್ಮದಿನಾಚರಣೆಯ ಅಂಗವಾಗಿ ಹಾಗೂ ಗಂಧದಗುಡಿ ಚಿತ್ರದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಇದನ್ನು ಅಪ್ಪು ಅವರ ಗಂಧದಗುಡಿ ಅಗರಬತ್ತಿಯ ಶುಭಾರಂಭದೊಂದಿಗೆ ಸ್ಮರಿಸೋಣ'' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಗಂಧದಗುಡಿ ಅಗರಬತ್ತಿ ಬಳಸಿ ಸಮಾಧಿಗೆ ಪೂಜೆ: ವಿಶೇಷ ಅಂದ್ರೆ, ಇಂದು ಕಂಠೀವರ ಸ್ಟುಡಿಯೋದಲ್ಲಿ ಡಾ.ರಾಜ್‌ಕುಮಾರ್ ಸಮಾಧಿಗೆ ಅಪ್ಪು ಗಂಧದಗುಡಿ ಅಗರಬತ್ತಿ ಬಳಸಿ ಪೂಜೆ ಮಾಡುವ ಮೂಲಕ ಗಂಧದಗುಡಿ ಅಗರಬತ್ತಿ ಉದ್ಯಮಕ್ಕೆ ಚಾಲನೆ ನೀಡಲಾಯಿತು. ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ಅಶ್ವಿನಿ ಹಾಗೂ ಮಗಳು ವಂದಿತಾ ಸೇರಿದಂತೆ ಕುಟುಂಬದ ಕೆಲ ಸದಸ್ಯರು ಈ ಅಗರಬತ್ತಿಯಿಂದ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು.