ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಪೊಲಿಟಿಕಲ್ ಡ್ರಾಮಾ 'ಗೇಮ್ ಚೇಂಜರ್' ಇಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಸಿನಿಮಾ ಕೋಟ್ಯಂತರ ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಹಬ್ಬದ ವಾತಾವರಣ ಮೂಡಿಸಿದೆ. ಶಂಕರ್ ನಿರ್ದೇಶನದ ಸಿನಿಮಾ ತನ್ನ ಮೊದಲ ದಿನದ ಮೊದಲ ಪ್ರದರ್ಶನದಲ್ಲೇ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದೆ. ದೇಶಾದ್ಯಂತ ಮಾರ್ನಿಂಗ್ ಶೋಗಳನ್ನು ಆಯೋಜಿಸಲಾಗಿತ್ತು. ಆದ್ರೆ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಬಹುತೇಕ ಮೆಚ್ಚುಗೆ ಪಡೆದುಕೊಂಡಿದೆ.
ಸುಮಾರು 450 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿರುವ 'ಗೇಮ್ ಚೇಂಜರ್' ಚಿತ್ರ ನಿರ್ದೇಶಕ ಮತ್ತು ನಟರಿಗಿಬ್ಬರಿಗೂ ಪ್ರಮುಖ ಬಿಡುಗಡೆಯಾಗಿದ್ದು, ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆದಾಗ್ಯೂ, ನಿರ್ಮಾಪಕರಿಗೆ ನಿರಾಶೆ ಮೂಡಿಸುವಂತೆ, ಚಿತ್ರ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿದೆ. ಅನೇಕ ಎಕ್ಸ್ ಬಳಕೆದಾರರು ಗೇಮ್ ಚೇಂಜರ್ ಅನ್ನು ಒಮ್ಮೆ ಮಾತ್ರ ವೀಕ್ಷಿಸಬಹುದಾದ ಚಿತ್ರ ಎಂದು ಉಲ್ಲೇಖಿಸಿದ್ದಾರೆ.
ಸಿನಿಮಾದ ಗ್ರ್ಯಾಂಡ್ ರಿಲೀಸ್ ನಂತರ ಅನೇಕ ಅಭಿಮಾನಿಗಳು ಮತ್ತು ಸಿನಿಪ್ರಿಯರು ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ ಎಕ್ಸ್ನಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ನೆಗೆಟಿವ್ ಪಾಸಿಟಿವ್ ಎರಡೂ ಇದ್ದರೂ, ವಿಮರ್ಶೆಗಳಲ್ಲಿ ಸಾಮಾನ್ಯ ವಿಷಯವೆಂದರೆ ಬಹುತೇಕರು ರಾಮ್ ಚರಣ್ ಅವರ ಅಭಿನಯವನ್ನು ಗುಣಗಾನ ಮಾಡಿದ್ದಾರೆ. ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, ತಮ್ಮ ಮ್ಯಾಗ್ನೆಟಿಕ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಅಮೋಘ ಅಭಿನಯದಿಂದ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ.
ಎಕ್ಸ್ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, "ರಾಮ್ ಚರಣ್ ತಮ್ಮ ವರ್ಚಸ್ಸಿನಿಂದ ಸ್ಕ್ರೀನ್ ಮೇಲೆ ರಾರಾಜಿಸಿದ್ದಾರೆ" ಎಂದು ತಿಳಿಸಿದ್ದಾರೆ. ರಾ ಮಚಾ ಮಚಾ.. ಹಾಡಿನ ಅವರ ಡ್ಯಾನ್ಸ್ ಅನ್ನು ಅಭಿಮಾನಿಗಳು ಗುಣಗಾನ ಮಾಡಿದ್ದಾರೆ.
ಆದಾಗ್ಯೂ, ಚಿತ್ರದ ನಿರೂಪಣೆ ಮತ್ತು ವೇಗಕ್ಕೆ ಪ್ರೇಕ್ಷಕರಿಂದ ಟೀಕೆ ವ್ಯಕ್ತವಾಗಿದೆ. ರಾಮ್ ಚರಣ್ ಮತ್ತು ಎಸ್.ಜೆ.ಸೂರ್ಯ ಇಬ್ಬರೂ ಅಮೋಘವಾಗಿ ಅಭಿನಯಿಸಿದ್ದರೂ, ಚಿತ್ರವನ್ನು ಕಾರ್ಯಗತಗೊಳಿಸುವಲ್ಲಿ ಎಡವಿದ್ದಾರೆಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. "ರಾಮ್ ಚರಣ್ ಮತ್ತು ಎಸ್.ಜೆ.ಸೂರ್ಯ ಅವರ ಅಭಿನಯ ಅತ್ಯುತ್ತಮ, ಆದರೆ ನಿರೂಪಣೆ ಕಳಪೆಯಾಗಿದೆ ಮತ್ತು ಸ್ಕ್ರೀನ್ಪ್ಲೇ ಕಂಪ್ಲೀಟ್ಲಿ ಡೆಡ್" ಎಂದು ಎಕ್ಸ್ ಬಳಕೆದಾರರೋರ್ವರು ತಿಳಿಸಿದ್ದಾರೆ. ಮತ್ತೊಬ್ಬರು ಈ ಚಿತ್ರದಿಂದ "ರಾಮ್ ಚರಣ್ ಸಮಯ ವ್ಯರ್ಥ" ಎಂದು ತಿಳಿಸಿದ್ದಾರೆ. ರಾಮ್ ಚರಣ್ ಈ ಪೊಲಿಟಿಕಲ್ ಡ್ರಾಮಾಗೆ 4 ವರ್ಷಗಳನ್ನು ಹೇಗೆ ನೀಡಿದರು ಎಂಬುದನ್ನು ಒತ್ತಿ ಹೇಳಿದ್ದಾರೆ. ಸೋಲೋ ಹೀರೋ ಆಗಿ ನಾಲ್ಕು ವರ್ಷಗಳ ಬಳಿಕ ಬಂದ ರಾಮ್ ಚರಣ್ ಅವರ ಚಿತ್ರ ಇದಾಗಿದೆ.