ಮಾಡೆಲ್ ಮತ್ತು ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡ ಬರ್ಖಾ ಮದನ್ 2012ರಲ್ಲಿ ತೆಗೆದುಕೊಂಡ ನಿರ್ಧಾರ ಅನೇಕರನ್ನು ಅಚ್ಚರಿಗೊಳಿಸಿತು. ಸಿನಿಮಾ ಎಂಬ ಆಕರ್ಷಕ ಜಗತ್ತನ್ನು ತೊರೆದು ಅಧ್ಯಾತ್ಮಿಕ ಮಾರ್ಗಕ್ಕೆ ಹೆಜ್ಜೆಯಿಟ್ಟರು. ಸದ್ಯ ಬೌದ್ಧ ಸನ್ಯಾಸಿ ಗ್ಯಾಲ್ಟೆನ್ ಸ್ಯಾಮ್ಟೆನ್ ಎಂದು ಗುರುತಿಸಿಕೊಂಡಿದ್ದಾರೆ. ಮನರಂಜನಾ ಉದ್ಯಮದಲ್ಲಿ ಭರವಸೆಯ ವೃತ್ತಿಜೀವನದ ನಂತರವೂ ಅನೇಕ ಸೆಲೆಬ್ರಿಟಿಗಳು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡಿದ್ದು, ಬರ್ಖಾ ಇದರಿಂದ ಹೊರತಾಗಿಲ್ಲ.
ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚದಿಂದ ಆಧ್ಯಾತ್ಮಿಕತೆವರೆಗೂ ಬರ್ಖಾ ಅವರ ಪ್ರಯಾಣ ಬಹಳ ಸ್ಪೂರ್ತಿದಾಯಕದ ಜೊತೆಗೆ ಆಶ್ಚರ್ಯಕರವಾಗಿದೆ. ಅಭಿನಯ ತ್ಯಜಿಸುವ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ, ಬಾಲಿವುಡ್‌ನಲ್ಲಿ ಯಶಸ್ವಿ ವೃತ್ತಿಜೀವನ ಹೊಂದಿದ್ದರು. 1996ರಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ "ಖಿಲಾಡಿಯೋಂ ಕಾ ಖಿಲಾಡಿ" ಎಂಬ ಹಿಟ್ ಆ್ಯಕ್ಷನ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾ ಸೂಪರ್ ಹಿಟ್ ಆದ್ರೂ ಮತ್ತೊಂದು ಪ್ರಮುಖ ಪಾತ್ರಕ್ಕಾಗಿ ಅವರು 7 ವರ್ಷ ಕಾಯಬೇಕಾಯಿತು.
"ಖಿಲಾಡಿಯೋಂ ಕಾ ಖಿಲಾಡಿ" ನಂತರ ರಾಮ್ ಗೋಪಾಲ್ ವರ್ಮಾ ಅವರ ಸೂಪರ್ ನ್ಯಾಚುರಲ್ ಥ್ರಿಲ್ಲರ್ 'ಭೂತ್' (2003) ಚಿತ್ರದ ಮೂಲಕ ಅಪಾರ ಮನ್ನಣೆ ಪಡೆದುಕೊಂಡರು. ಮಂಜೀತ್ ಖೋಸ್ಲಾ ಎಂಬ ಪ್ರೇತದ ಪಾತ್ರ ನಿರ್ವಹಿಸಿ ವಿಮರ್ಶಾತ್ಮಕ ಮೆಚ್ಚುಗೆ ಸಂಪಾದಿಸಿದರು. ಇದು ಅವರನ್ನು ಸುಪ್ರಸಿದ್ಧ ನಟಿಯನ್ನಾಗಿಸಲು ಸಹಾಯ ಮಾಡಿತು. ಊರ್ಮಿಳಾ ಮಾತೋಂಡ್ಕರ್, ನಾನಾ ಪಾಟೇಕರ್, ರೇಖಾ, ಅಜಯ್ ದೇವಗನ್ ಸೇರಿ ಪವರ್ಫುಲ್ ಕಾಸ್ಟಿಂಗ್ ಹೊರತಾಗಿಯೂ ಬರ್ಖಾ ಅವರು ಈ ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡರು.
ಅಭಿನಯ ಮಾತ್ರವಲ್ಲದೇ ಬರ್ಖಾ ಮಾಡೆಲಿಂಗ್ ಉದ್ಯಮದಲ್ಲೂ ಗುರುತಿಸಿಕೊಂಡಿದ್ದರು. 1994ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ಸ್ ಐಶ್ವರ್ಯಾ ರೈ ಮತ್ತು ಸುಶ್ಮಿತಾ ಸೇನ್ ವಿರುದ್ಧ ಸ್ಪರ್ಧಿಸಿದ್ದರು. ಅಲ್ಲದೇ ಮಿಸ್ ಟೂರಿಸಂ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.