ಕರ್ನಾಟಕ

karnataka

ETV Bharat / entertainment

ಫ್ರೆಂಡ್​ಶಿಪ್​ ಡೇ: ಸ್ನೇಹದ ಮಹತ್ವ ಸಾರಿದ ಸ್ಯಾಂಡಲ್​​ವುಡ್​ ಸೂಪರ್ ಹಿಟ್ ಚಿತ್ರಗಳಿವು - Movies On Friendship - MOVIES ON FRIENDSHIP

ಈ ಜಗತ್ತಿನಲ್ಲಿ ಪ್ರೀತಿ, ಪ್ರೇಮ, ರಕ್ತಸಂಬಂಧದಷ್ಟೇ ಸ್ನೇಹ ಸಂಬಂಧವೂ ತನ್ನದೇ ಆದ ಮಹತ್ವ ಹೊಂದಿದೆ. ಅದೆಷ್ಟೋ ಜನರ ಜೀವನದಲ್ಲಿ ಸ್ನೇಹ ಒಂದು ಹಂತ ಮೇಲು ಎಂದೇ ಹೇಳಬಹುದು. ಈ ನಿಷ್ಕಲ್ಮಷ, ಪಾವಿತ್ರ್ಯ, ಮಧುರ ಸಂಬಂಧವನ್ನು ಆಚರಿಸುವ ದಿನವೇ ಫ್ರೆಂಡ್​ಶಿಪ್​ ಡೇ. ಎಲ್ಲೆಡೆ ಆಗಸ್ಟ್ ಮೊದಲ ಭಾನುವಾರವನ್ನು 'ಸ್ನೇಹಿತರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ದಿನ ನೀವು ನೋಡಿ ಆನಂದಿಸಬಹುದಾದ ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.

Sipayi, Diggajaru Poster
ಸಿಪಾಯಿ, ದಿಗ್ಗಜರು ಪೋಸ್ಟರ್ (Film Poster)

By ETV Bharat Karnataka Team

Published : Aug 4, 2024, 5:30 AM IST

ಕನ್ನಡ ಚಿತ್ರರಂಗದಲ್ಲಿ 'ಗೆಳೆತನ'ದ ಬಗ್ಗೆ ಸಾಕಷ್ಟು ಸಿನಿಮಾಗಳು ಮೂಡಿ ಬಂದಿವೆ. ಸ್ನೇಹದ ಕಥೆಯನ್ನಿಟ್ಟುಕೊಂಡು ಬಂದ ಹಲವು ಚಿತ್ರಗಳು ಸಿನಿಪ್ರೇಮಿಗಳ ಹೃದಯ ಗೆಲ್ಲುವುದರ ಜೊತೆಗೆ ಸೂಪರ್ ಹಿಟ್ ಆಗಿವೆ. ಆಗಸ್ಟ್ ಮೊದಲ ಭಾನುವಾರವನ್ನು 'ಸ್ನೇಹಿತರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಸ್ನೇಹ ಎಷ್ಟು ಮಹತ್ವ ಎಂದು ಸಾರಿದ ಸೂಪರ್ ಹಿಟ್ ಚಿತ್ರಗಳ ಒಂದು ಮೆಲುಕು ನೋಟ ಇಲ್ಲಿದೆ.

ದಿಗ್ಗಜರು: ಸ್ಯಾಂಡಲ್​​ವುಡ್​ನಲ್ಲಿ ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ಕುಚಿಕು ಸ್ನೇಹಿತರಾಗಿ ಸಮಾಜಕ್ಕೆ ಮಾದರಿಯಾದವರು ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್. ಇಬರಿಬ್ಬರ ಸ್ನೇಹ ನೋಡಿ ನಿರ್ದೇಶಕ ಡಿ ರಾಜೇಂದ್ರ ಬಾಬು 'ದಿಗ್ಗಜರು' ಎಂಬ ಸಿನಿಮಾ ಮಾಡ್ತಾರೆ. ಇದು ತಮಿಳಿನ ನತ್ಪುಕ್ಕಾಗ ಸಿನಿಮಾದ ರಿಮೇಕ್ ಆಗಿದ್ದರೂ ಕೂಡ ವಿಷ್ಣು ದಾದಾ ಹಾಗೂ ಅಂಬಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಈ ಸಿನಿಮಾ ಅಂತಸ್ತಿನ ಅಂತರವಿದ್ದರೂ ಬಾಲ್ಯದಿಂದಲೂ ಸ್ನೇಹಿತರಾಗಿ ಬೆಳೆದ ಇಬ್ಬರ ಸುಂದರ ಸ್ನೇಹದ ಕಥೆಯಿದು. ಈ ಸಿನಿಮಾಗೆ ಹಂಸಲೇಖ ಸಂಗೀತ ನೀಡಿದ್ದು, ಚಿತ್ರದಲ್ಲಿ ವಿಷ್ಣುವರ್ಧನ್ ಡಬ್ಬಲ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದರು. ದಿಗ್ಗಜರು ಚಿತ್ರದ ಕುಚಿಕು ಕುಚಿಕು ಹಾಡು ಇಂದಿಗೂ ಅಂದಿನಷ್ಟೇ ಜನಪ್ರಿಯ.

ಕಾಮನ ಬಿಲ್ಲು: ಡಾ. ರಾಜ್​​ಕುಮಾರ್ ಹಾಗೂ ಅನಂತ್ ನಾಗ್ ಬೆಳ್ಳಿ ತೆರೆಮೇಲೆ ಪ್ರಾಣ ಸ್ನೇಹಿತರಾಗಿ ಕಾಣಿಸಿಕೊಂಡು ಸ್ನೇಹಿತರಂದ್ರೆ ಹೀಗಿರಬೇಕೆಂದು ತೋರಿಸಿದ ಸಿನಿಮಾ 'ಕಾಮನ ಬಿಲ್ಲು'. ಚಿ ದತ್ತರಾಜ್ ನಿರ್ದೇಶನದಲ್ಲಿ ಬಂದ ಈ ಚಿತ್ರದಲ್ಲಿ ತನ್ನ ಸ್ನೇಹಿತನಿಗಾಗಿ ತಾನು ಪ್ರೀತಿಸಿದ ಹುಡುಗಿಯನ್ನು ತ್ಯಾಗ ಮಾಡಿ ವಿಶೇಷ ಚೇತನರನ್ನು ಮದುವೆಯಾಗುವ ರಾಜ್​​ಕುಮಾರ್ ಅಭಿನಯ ವಿಕ್ಷಕರ ಕಣ್ಣಾಲಿಗಳನ್ನು ತೇವಗೊಳಿತ್ತು.

ಸಿಪಾಯಿ: ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅಭಿನಯಿಸಿದ ಸಿನಿಮಾ 'ಸಿಪಾಯಿ'. ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶಿಸಿದ್ದ ಸಿಪಾಯಿ ಚಿತ್ರದಲ್ಲಿ ಸ್ನೇಹಕ್ಕೂ ಸ್ನೇಹ ಎಂಬ ಹಾಡು ಸೂಪರ್ ಹಿಟ್ ಆಗಿತ್ತು. 1996ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರದಲ್ಲಿ ಪ್ರೇಮಕಥೆ ಜೊತೆಗೆ ಸೈನಿಕರಿಬ್ಬರ ಸ್ನೇಹವನ್ನು ಹೇಳಲಾಗಿತ್ತು. ಈ ಚಿತ್ರ ಸೂಪರ್ ಹಿಟ್ ಆಗುವುದರ ಜೊತೆಗೆ ರವಿಚಂದ್ರನ್ ಹಾಗೂ ಚಿರಂಜೀವಿ ಸದಾ ಸ್ನೇಹಿತರಾಗಿ ಉಳಿಯುವಂತೆ ಮಾಡಿತ್ತು. ಬಳಿಕ ಸಿಪಾಯಿ ಚಿತ್ರ ತೆಲುಗಿನಲ್ಲಿ 'ಮೇಜರ್' ಹೆಸರಿನಲ್ಲಿ ರಿಮೇಕ್ ಆಗಿತ್ತು.

ಅಮೆರಿಕಾ ಅಮೆರಿಕಾ:ಕರಾವಳಿಯ ಹಳ್ಳಿಯೊಂದರಲ್ಲಿ ಬೆಳೆಯುವ ಮೂವರು ಸ್ನೇಹಿತರು ಮತ್ತು ಅವರ ಮಧ್ಯೆ ಚಿಗರೊಡೆಯುವ ಪ್ರೇಮದ ಕಥೆಯನ್ನು ಹೇಳಿದ ಚಿತ್ರ 'ಅಮೆರಿಕಾ ಅಮೆರಿಕಾ'. ಸಿನಿಮಾದಲ್ಲಿ ನಟ ರಮೇಶ್ ಅರವಿಂದ್, ಪಂಚಮುಖಿ ಹೇಮಾ ಹಾಗೂ ಅಕ್ಷಯ್ ಆನಂದ್ ಕಾಣಿಸಿಕೊಂಡಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರ 1997ರಲ್ಲಿ ಬಿಡುಗಡೆ ಆಗಿ ಯಶ ಕಂಡಿತ್ತು. ಚಿತ್ರದ ನೂರು ಜನ್ಮಕ್ಕೂ, ಯಾವ ಮೋಹನ ಮುರುಳಿ ಕರೆಯಿತು ಸೇರಿದಂತೆ ಎಲ್ಲಾ ಹಾಡುಗಳು ಹಿಟ್ ಆಗುವುದರ ಜೊತೆಗೆ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.

ನಮ್ಮೂರ ಮಂದಾರ ಹೂವೆ: ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್, ರಮೇಶ್ ಅರವಿಂದ್ ಹಾಗೂ ಪ್ರೇಮಾ ತೆರೆಹಂಚಿಕೊಂಡ ಚಿತ್ರ ನಮ್ಮೂರ ಮಂದಾರ ಹೂವೆ. ಮಲೆನಾಡಿನ ಪ್ರಕೃತಿ ಮಧ್ಯೆ ಅರಳುವ ತ್ರಿಕೋನ ಪ್ರೇಮಕಥೆಯಿದು. ಈ ಚಿತ್ರದಲ್ಲಿ ಇಬ್ಬರು ಪ್ರಾಣ ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸಿ ನಂತರ ಒಬ್ಬರಿಗಾಗಿ ಒಬ್ಬರು ತಮ್ಮ ಪ್ರೀತಿಯನ್ನು ತ್ಯಾಗ ಮಾಡಲು ಮುಂದಾಗುತ್ತಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಸಿನಿಮಾದಲ್ಲಿ ಬರುವ ಫ್ರೆಂಡ್‌ಷಿಪ್ ಸ್ಲೋಗನ್ ಟ್ರೆಂಡ್ ಆಯಿತು. ರಮೇಶ್ ಅರವಿಂದ್ ಹಾಗೂ ಶಿವರಾಜ್​​ಕುಮಾರ್ ಭೇಟಿ ಮಾಡುವ ಸಮಯದಲ್ಲಿ ಬಳಸುತ್ತಿದ್ದ ಹೇ ಹೇ...ಓಹೋ ಓಹೋ ಎನ್ನುವ ಪದ ಸ್ನೇಹಿತರ ಸ್ಲೋಗನ್ ಆಗಿತ್ತು. ಈ ಚಿತ್ರ ಬಾಕ್ಸ್​ ಆಫೀಸ್​​​ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡು ಮುಂದೆ ಅಮೆರಿಕಾದ ಕೆಲ ಚಿತ್ರಮಂದಿರಗಳಲ್ಲಿಯೂ ಪ್ರದರ್ಶನ ಕಂಡಿತ್ತು. ಈ ಸಿನಿಮಾ ಬಳಿಕ ರಮೇಶ್ ಅರವಿಂದ್ ತ್ಯಾಗರಾಜ ಎಂಬ ಹೆಸರು ಪಡೆದುಕೊಂಡರು.

ಸ್ನೇಹಲೋಕ: ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ತ್ಯಾಗಮಾಡುವ ಸ್ನೇಹಿತನಾಗಿ ಕಾಣಿಸಿಕೊಂಡಿದ್ದ ರಮೇಶ್ ಅರವಿಂದ್ 'ಸ್ನೇಹಲೋಕ' ಸಿನಿಮಾದಲ್ಲಿ ಸೀರಿಯಸ್ ಅಣ್ಣನ ಪಾತ್ರ ನಿರ್ವಹಿಸಿದ್ದರು. ರಮೇಶ್ ಜೊತೆಗೆ ರಾಮ್ ಕುಮಾರ್, ವಿನೋದ್ ರಾಜ್, ಶಶಿಕುಮಾರ್ ಹಾಗೂ ಅನು ಪ್ರಭಾಕರ್ ಮುಖ್ಯಭೂಮಿಕೆಯಲ್ಲಿದ್ದ 'ಸ್ನೇಹಲೋಕ' 1999ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗುತ್ತೆ. ಪ್ರಾಣ ಸ್ನೇಹಿತನ ಸಹೋದರಿಯೆಂದು ತಿಳಿಯದೇ ಪ್ರೀತಿಸುವ ನಾಯಕ ನಂತರ ತನ್ನ ಸ್ನೇಹಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡಲು ರೆಡಿಯಾಗುತ್ತಾನೆ. ಸ್ನೇಹಕ್ಕೆ ಸಾಕ್ಷಿಯಾದ ಈ ಚಿತ್ರಕ್ಕೆ ಇಂದಿಗೂ ಅಭಿಮಾನಿಗಳಿದ್ದಾರೆ.

ಗಾಳಿಪಟ: ಸಿಟಿ ಜೀವನ ಸಾಕಾಯಿತು ಅಂತಾ ಮೂವರು ಸ್ನೇಹಿತರು ಮಲೆನಾಡಿಗೆ ಬರುವ ಚಿತ್ರ ಗಾಳಿಪಟ. ಗಣೇಶ್, ದಿಗಂತ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಸ್ನೇಹಿತರಾಗಿ ಸಿನಿಪ್ರೇಮಿಗಳನ್ನು ರಂಜಿಸುತ್ತಾರೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಚಿತ್ರ ಕಾಮಿಡಿ ಜೊತೆಗೆ ಗೆಳತನದ ಕಥೆಯಾಗಿತ್ತು. ಈ ಚಿತ್ರ ಕೂಡಾ ಹಿಟ್ ಸಿನಿಮಾಗಳ ಸಾಲಿನಲ್ಲಿ ಸೇರ್ಪಡೆಗೊಂಡಿತ್ತು.

ಹುಡುಗರು: ತಮ್ಮ ಸ್ನೇಹಿತನ ಪ್ರೀತಿಯನ್ನು ಉಳಿಸಲು ಹೋಗಿ ಒಬ್ಬ ತನ್ನ ಪ್ರೀತಿ, ಮತ್ತೊಬ್ಬ ತನ್ನ ಕಾಲು ಕಳೆದುಕೊಂಡರೆ, ಇನ್ನೊಬ್ಬ ಕಿವುಡನಾಗುವ ಚಿತ್ರ 'ಹುಡುಗರು'. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಮೊದಲ ಬಾರಿಗೆ ಶ್ರೀನಗರ ಕಿಟ್ಟಿ ಮತ್ತು ಯೋಗೇಶ್ ಅವರೊಂದಿಗೆ ನಟಿಸಿದ ಹುಡುಗರು ಚಿತ್ರ 2011ರಲ್ಲಿ ತೆರೆಕಂಡು ಬ್ಲಾಕ್ ಬ್ಲಸ್ಟರ್ ಹಿಟ್​ ಆಗುತ್ತೆ.

ಗೆಳೆಯ: ಪ್ರಜ್ವಲ್ ದೇವರಾಜ್ ಹಾಗೂ ತರುಣ್ ಚಂದ್ರ ಒಟ್ಟಿಗೆ ಅಭಿನಯಿಸಿದ ಚಿತ್ರ 'ಗೆಳೆಯ'. ಇಬ್ಬರು ಸ್ನೇಹಿತರು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾರೆ. ಆದ್ರೆ ಇವರಿಬ್ಬರು ಏಕೆ ಎರಡು ರೌಡಿ ಗುಂಪಿಗಳಿಗೆ ಸೇರುತ್ತಾರೆ?, ಆ ನಂತರ ಇವರ ಸ್ನೇಹ ಉಳಿಯುತ್ತಾ? ಎಂಬ ಕಥೆಯನ್ನ ಈ ಚಿತ್ರ ಒಳಗೊಂಡಿದೆ. ಸ್ನೇಹದ ಕಥೆ ಜೊತೆಗೆ ಹಾಡುಗಳು ಹಿಟ್ ಆಗಿ ಸಿನಿಮಾ ಕೂಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿದೆ.

ಇದನ್ನೂ ಓದಿ:ಶೀಘ್ರದಲ್ಲೇ ತರುಣ್​​ ಸುಧೀರ್-ಸೋನಾಲ್ ವಿವಾಹ: ಮಾಹಿತಿ ಹಂಚಿಕೊಂಡ ನಿರ್ದೇಶಕ-ನಟಿ ಜೋಡಿ - Tharun Sonal Wedding Announcement

ಜಾಲಿಡೇಸ್: 2007ರಲ್ಲಿ ಪ್ರದೀಪ್, ಪ್ರವೀಣ್, ವಿಶ್ವಾಸ್, ಸ್ಫೂರ್ತಿ ಸುರೇಶ್, ಐಶ್ವರ್ಯ ನಾಗ್ ಸೇರಿದಂತೆ ಯುವ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿನಿಮಾ 'ಜಾಲಿಡೇಸ್'. ಈ ಚಿತ್ರದಲ್ಲಿ ನಾಲ್ಕು ಸ್ನೇಹಿತರ ಕಥೆಯನ್ನು ಹೇಳಲಾಗಿತ್ತು. ತೆಲುಗಿನ ಹ್ಯಾಪಿಡೇಸ್ ಚಿತ್ರದ ರಿಮೇಕ್ ಆಗಿದ್ದ ಜಾಲಿಡೇಸ್ ಸಿನಿಮಾ ಕನ್ನಡದಲ್ಲಿ ಹಿಟ್ ಆಗಿದೆ. ಇವಿಷ್ಟು ಸ್ನೇಹ ಎಷ್ಟು ಮಹತ್ವ ಎಂಬ ಸಂದೇಶ ಸಾರಿದ ಚಿತ್ರಗಳಿವು. ಇವುಗಳಲ್ಲದೇ ಕನ್ನಡದ ಇನ್ನೂ ಕೆಲ ಚಿತ್ರಗಳು ಸ್ನೇಹದ ಕುರಿತಾದ ಸಾರವನ್ನು ಒಳಗೊಂಡಿದೆ.

ABOUT THE AUTHOR

...view details