ಸ್ಯಾಂಡಲ್ವುಡ್ನಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಸಿನಿ ಪ್ರೇಮಿಗಳು ಯಾವಾಗಲೂ ಮೆಚ್ಚಿಕೊಳ್ಳುತ್ತಾರೆ ಅನ್ನೋದಕ್ಕೆ ಕಳೆದ ವಾರಷ್ಟೇ ಬಿಡುಗಡೆಯಾದ ಡಾಲಿ ಧನಂಜಯ ನಟನೆಯ 'ಕೋಟಿ' ಚಿತ್ರ ಒಂದು ನಿದರ್ಶನ. ಸಿನಿಮಾ ನೋಡಿದ ಪ್ರೇಕ್ಷಕರು ಫರ್ಫೆಕ್ಟ್ ಫ್ಯಾಮಿಲಿ ಎಂಟರ್‌ಟೈನರ್ ಅಂತಾ ಹಾಡಿ ಹೊಗಳುತ್ತಿದ್ದಾರೆ. ಬಹಳ ದಿನಗಳ ನಂತರ ಕನ್ನಡದಲ್ಲಿ ಇಡೀ ಕುಟುಂಬವೇ ಕೂತು ನೋಡುವ ಚಿತ್ರವೊಂದು ಬಂದಿದ್ದು, ಪ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆ ಹೆಚ್ಚೆಚ್ಚು ಬರುತ್ತಿದ್ದಾರೆ. ಧನಂಜಯ್, ರಮೇಶ್, ಇಂದಿರಾ , ತಾರಾ ಅನುರಾಧ ಅವರ ನಟನೆ, ಕಲರ್ಫುಲ್ ಕ್ಲೈಮ್ಯಾಕ್ಸ್ ಮತ್ತು ದುನಿಯಾ ವಿಜಯ್ ಅವರ ಕ್ಯಾಮಿಯೋಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಕೋಟಿ' ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಚಿತ್ರತಂಡ ಮೈಸೂರಿನಲ್ಲಿ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಿದ್ದು, ಜಿಲ್ಲೆಯ ಜನಪ್ರಿಯ ರಾಜಕಾರಣಿ, ಮಾಜಿ ಸಂಸದ ಪ್ರತಾಪ್ ಸಿಂಹ ತಂಡದ ಜತೆ ಸಿನಿಮಾ ವೀಕ್ಷಿಸಲಿದ್ದಾರೆ. ವೀಕ್ಷಕರಿಂದಲೂ ಅದ್ಭುತ ರೆಸ್ಪಾನ್ಸ್ ಬರುತ್ತಿದ್ದು, ಪ್ಯಾಮಿಲಿ ಆಡಿಯನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರಿನಲ್ಲಿ 'ಕೋಟಿ'ಯ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಖತ್ ಸದ್ದು ಮಾಡುತ್ತಿದೆ.
ಚಿತ್ರದಲ್ಲಿ ಧನಂಜಯ್ ಕೋಟಿ ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೇ, ನೋವು ನೀಡದೇ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಈ ಕಥಾಹಂದರದ 'ಕೋಟಿ' ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚು ಚಿತ್ರೀಕರಣ ಮೈಸೂರಿನಲ್ಲಿ ನಡೆದಿದೆ. ಸ್ಟೆರ್ಲಿಂಗ್ ಚಿತ್ರಮಂದಿರ, ವಿವಿ ಮೊಹಲ್ಲಾ, ಮಾರ್ಕೆಟ್, ದೇವೇಗೌಡ ಸರ್ಕಲ್ ಇನ್ನೂ ಹಲವು ಕಡೆ ಚಿತ್ರೀಕರಣ ನಡೆದಿದೆ.