7 ವರ್ಷಗಳ ನಂತರ ದಕ್ಷಿಣ ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು ಮುಖ್ಯಭೂಮಿಕೆಯ 'ಶ್ರೀಮಂತುಡು' ಚಿತ್ರ ನಿರ್ಮಾಪಕರು ಕೃತಿಚೌರ್ಯ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. 2015ರಲ್ಲಿ 'ಶ್ರೀಮಂತುಡು' ಸಿನಿಮಾ ತೆರೆಕಂಡಿತು. ತೆಲುಗು ಚಲನಚಿತ್ರೋದ್ಯಮದಲ್ಲಿ ಬಿರುಗಾಳಿ ಎಬ್ಬಿಸಿ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಿತು. ಅದಾಗ್ಯೂ, ಆರ್‌ಡಿ ವಿಲ್ಸನ್ ಎಂದೂ ಕರೆಯಲ್ಪಡುವ ತೆಲುಗು ಬರಹಗಾರ ಶರತ್ ಚಂದ್ರ ಅವರು 2017ರಲ್ಲಿ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯ ಮತ್ತು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಚಿತ್ರದ ವಿರುದ್ಧ ಕೃತಿಚೌರ್ಯ ಪ್ರಕರಣವನ್ನು ದಾಖಲಿಸಿದರು. ಇದು ಚಲನಚಿತ್ರ ನಿರ್ಮಾಪಕರಿಗೆ ಕಾನೂನು ಹೋರಾಟಕ್ಕಿಳಿಯುವಂತೆ ಮಾಡಿತು.
ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ರದ್ದುಗೊಳಿಸುವ ಹಲವು ಪ್ರಯತ್ನಗಳ ಹೊರತಾಗಿಯೂ, ಶ್ರೀಮಂತುಡು ಚಿತ್ರ ತಯಾರಕರ ಅರ್ಜಿಯನ್ನು ಜನವರಿ 30 ರಂದು ವಜಾಗೊಳಿಸಲಾಯಿತು. ಇದು ತೆಲಂಗಾಣ ಹೈಕೋರ್ಟ್‌ನಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಕಳೆದ ಏಳು ವರ್ಷಗಳಿಂದ ಮೌನ ವಹಿಸಿದ್ದ ಶ್ರೀಮಂತುಡು ನಿರ್ಮಾಪಕರು, ಕಾನೂನು ಪ್ರಕ್ರಿಯೆಯ ಈ ಬೆಳವಣಿಗೆಯ ನಂತರ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಎಚ್ಚರಿಕೆ ಮತ್ತು ಸಂಯಮ ವಹಿಸುವಂತೆ ಒತ್ತಾಯಿಸಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಹೇಳಿಕೆ ಹೀಗಿದೆ: "ಈ ವಿಷಯ ಪ್ರಸ್ತುತ ಕಾನೂನು ಪರಿಶೀಲನೆಯಲ್ಲಿದೆ. ಈವರೆಗೆ ಯಾವುದೇ ವಿಚಾರಣೆಗಳು ಅಥವಾ ತೀರ್ಪುಗಳಿಲ್ಲ. ನಾವು ಮಾಧ್ಯಮಗಳು ಮತ್ತು ಕಮೆಂಟೇಟರ್ಸ್ಗೆ ಅಕಾಲಿಕ ತೀರ್ಮಾನದಿಂದ ದೂರವಿರಲು ಒತ್ತಾಯಿಸುತ್ತೇವೆ. ಕಾನೂನು ಫಲಿತಾಂಶಗಳಿಗೆ ಆದ್ಯತೆ ಕೊಡುವುದಕ್ಕೆ ಒತ್ತು ನೀಡೋಣ" ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ಹೇಳಿಕೆಯು, ಕೃತಿಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಂತೆ ಕೇಳಿಕೊಂಡಿದೆ. ಕಾನೂನು ಪ್ರಕ್ರಿಯೆಯಲ್ಲಿ ತಾಳ್ಮೆ ಮತ್ತು ನಂಬಿಕೆ ಇರಿಸುವಂತೆ ನಾವು ಮನವಿ ಮಾಡುತ್ತೇವೆ. ನ್ಯಾಯೋಚಿತತೆ ಮತ್ತು ಸಮಗ್ರತೆಯ ತತ್ವಗಳನ್ನು ಪ್ರತಿಪಾದಿಸುತ್ತೇವೆ ಎಂದು ಕೂಡ ತಿಳಿಸಿದ್ದಾರೆ.