ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ವಿಚಾರಣೆ ಸಂದರ್ಭದಲ್ಲಿ ನೀಡಿರುವ ಹೇಳಿಕೆ ಕುರಿತ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿರುವ ಸುಪ್ರೀಂಕೋರ್ಟ್, ಈ ಸಂಬಂಧ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿದೆ. ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್‌ರಾಯ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ ಸಭೆ ನಡೆಸಿ ಈ ಆದೇಶ ನೀಡಿದೆ.
'ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಸೂಚನೆಗಳನ್ನು ಪಡೆದು ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ವಿನಂತಿಸುತ್ತೇವೆ. ಆ ಬಳಿಕ ನಾವು ಕೆಲ ಮೂಲ ಮಾರ್ಗಸೂಚಿಗಳನ್ನು ನೀಡಬಹುದು' ಎಂದು ಪೀಠ ಹೇಳಿದೆ. ಇನ್ನೆರಡು ದಿನಗಳಲ್ಲಿ ವರದಿಯನ್ನು ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಬೇಕು ಎಂದು ತಿಳಿಸಿರುವ ಸುಪ್ರೀಂಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಿದೆ.
ನ್ಯಾಯಮೂರ್ತಿಯೊಬ್ಬರ ಹೇಳಿಕೆಯ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದು ಚರ್ಚೆಗೆ ಗ್ರಾಸವಾಗಿತ್ತು. ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಗಮನ ಹರಿಸುವಂತೆ ಮುಖ್ಯನ್ಯಾಯಮೂರ್ತಿಗಳಿಗೆ ಒತ್ತಾಯಿಸಿದ್ದಾರೆ.
ಹೈಕೋರ್ಟ್ ಕಲಾಪ ನೇರಪ್ರಸಾರ ಸ್ಥಗಿತಕ್ಕೆ ವಕೀಲರ ಸಂಘದ ಮನವಿ: ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಕಲಾಪದ ನೇರ ಪ್ರಸಾರವನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸುವಂತೆ ಬೆಂಗಳೂರು ವಕೀಲರ ಸಂಘ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿಗೆ ಮನವಿ ಸಲ್ಲಿಸಿದೆ.
ಈ ಕುರಿತಂತೆ ಪತ್ರ ಬರೆದಿರುವ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, 'ಕಳೆದ ಕೆಲವು ದಿನಗಳಿಂದ ನ್ಯಾಯಾಲಯದಲ್ಲಿ ನಡೆಯುವ ಕಲಾಪದ ಸಂದರ್ಭಲ್ಲಿ ಕೆಲ ನ್ಯಾಯಮೂರ್ತಿಗಳು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳು ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಮುಖ್ಯ ಸುದ್ದಿಯಾಗಿ ಪ್ರಕಟವಾಗುತ್ತಿದೆ. ನ್ಯಾಯಮೂರ್ತಿ ವೇದ ವಾಸಾಚಾರ್ಯ ಶ್ರೀಶಾನಂದ ಅವರು ಮಹಿಳಾ ವಕೀಲರೊಬ್ಬರನ್ನು ಉದ್ದೇಶಿಸಿ ನೀಡಿರುವ ಹೇಳಿಕೆ ಇದೀಗ ಗೊಂದಲಗಳನ್ನುಂಟು ಮಾಡಿದ್ದು, ದೇಶದಾದ್ಯಂತ ವೈರಲ್ ಆಗಿದೆ. ನ್ಯಾಯಮೂರ್ತಿಗಳ ಹೇಳಿಕೆ ವಕೀಲ ಸಮುದಾಯ ಮತ್ತು ಯುವ ವಕೀಲರ ಭಾವನೆಗಳನ್ನು ನೋಯಿಸಿದೆ. ಜತೆಗೆ, ವಕೀಲರ ಖಂಡನೆಗೂ ಗುರಿಯಾಗಿದೆ' ಎಂದು ತಿಳಿಸಿದ್ದಾರೆ.
'ಅಲ್ಲದೆ, ಮಹಿಳಾ ವಕೀಲರ ಕುರಿತ ಹೇಳಿಕೆ ಇದೀಗ ಇಡೀ ರಾಷ್ಟ್ರದ ಗಮನವನ್ನು ಸೆಳೆಯುತ್ತಿದೆ. ಜತೆಗೆ, ವಕೀಲರು, ವಿಶೇಷವಾಗಿ ಮಹಿಳಾ ವಕೀಲರ ಬಗ್ಗೆ ನ್ಯಾಯಮೂರ್ತಿಗಳು ನಡೆಸಿಕೊಳ್ಳುತ್ತಿರುವುದರ ಕುರಿತ ತಿಳಿಯಲಿದೆ. ಹೀಗಾಗಿ, ಈ ಸೂಕ್ಷ್ಮತೆಯನ್ನು ಗಮನಿಸಿ ನೇರ ಪ್ರಸಾರವನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಕುರಿತಂತೆ ಸಾರ್ವಜನಿಕರಲ್ಲಿರುವ ಅಭಿಪ್ರಾಯವು ಸಂಪೂರ್ಣ ಬದಲಾಗಲಿದೆ. ನ್ಯಾಯಾಧೀಶರ ಆದೇಶಗಳು ಅತ್ಯುತ್ತಮವಾಗಿದ್ದು, ಅವರ ಒಳ್ಳೆಯ ಕೆಲಸಗಳನ್ನು ಮಾಡಿದ್ದರೂ, ಈ ರೀತಿಯ ವ್ಯಂಗ್ಯ ಭರಿತ ಹೇಳಿಕೆಗಳು ಅವರ ಹೆಸರನ್ನು ಹಾಳು ಮಾಡಲಿದೆ. ಹೀಗಾಗಿ, ತುರ್ತಾಗಿ ಕ್ರಮ ಕೈಗೊಳ್ಳಬೇಕು' ಎಂದು ಸಂಘದ ಅಧ್ಯಕ್ಷರ ಮನವಿಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ಮುಜರಾಯಿ ಇಲಾಖೆ ಅಧೀನದ ದೇಗುಲಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಪ್ರಶ್ನಿಸಿದ್ದ ಅರ್ಜಿ ವಜಾ - High Court