ದಕ್ಷಿಣ ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಹಾಗೂ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಬುಧವಾರ ತಡ ರಾತ್ರಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಅನ್ನಪೂರ್ಣ ಸ್ಟುಡಿಯೋದಲ್ಲಿ ಜೋಡಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ಹಸೆಮಣೆ ಏರಿದರು. ಈ ಸಮಾರಂಭದಲ್ಲಿ ಕುಟುಂಬದವರು, ಚಿತ್ರರಂಗದ ಗಣ್ಯರು, ಆಪ್ತರು, ಬಂಧುಗಳು ಪಾಲ್ಗೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ ಕೂಡಾ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದರು.
ಅದ್ಧೂರಿ ವಿವಾಹ ಸಮಾರಂಭದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಸದ್ಯ ಈ ಮದುವೆ ಕಾರ್ಯಕ್ರಮದ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನವದಂಪತಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ನೆಟಿಜನ್‌ಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಈ ಪ್ರೇಮಪಕ್ಷಿಗಳ ನಿಶ್ಚಿತಾರ್ಥ ಸಮಾರಂಭ ಆಗಸ್ಟ್ನಲ್ಲಿ ನಡೆದಿದ್ದು ನಿಮಗೆ ತಿಳಿದೇ ಇದೆ. ಮತ್ತೊಂದೆಡೆ, ನಾಗ ಚೈತನ್ಯ ಸಹೋದರ, ನಟ ಅಖಿಲ್ ಅವರು ಸಹ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ.
ಶೋಭಿತಾ ಧೂಳಿಪಾಲ ಅವರು 2013ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. 2016ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಸದ್ಯ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಹಾಲಿವುಡ್ ನಲ್ಲೂ ಅವಕಾಶ ಗಿಟ್ಟಿಸಿಕೊಂಡು ತಮ್ಮ ವೃತ್ತಿಜೀವನದಲ್ಲಿ ಮುನ್ನುಗ್ಗುತ್ತಿದ್ದಾರೆ.