ಬಹುನಿರೀಕ್ಷಿತ 'ಫೈಟರ್' ಸಿನಿಮಾ ತೆರೆಕಂಡು ಒಂದು ವಾರ ಪೂರ್ಣಗೊಂಡಿದೆ. ಜನವರಿ 25 ರಂದು ಅಂದರೆ ಕಳೆದ ಗುರುವಾರ ತೆರೆಕಂಡ ಈ ಸಿನಿಮಾ ವಿಶ್ವದಾದ್ಯಂತ 250 ಕೋಟಿ ರೂಪಾಯಿ ದಾಟುವಲ್ಲಿ ಯಶಸ್ಸು ಕಂಡಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ಈ ಚಿತ್ರ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ್ದು, ಈವರೆಗಿನ ಒಟ್ಟು ಬಾಕ್ಸ್ ಆಫೀಸ್ ಅಂಕಿ ಅಂಶ ಉತ್ತಮವಾಗಿದೆ.
ಚಿತ್ರಮಂದಿರಗಳಲ್ಲಿ ಫೈಟರ್ ಪ್ರದರ್ಶನ ಮುಂದುವರಿದಿದ್ದು, ಗಳಿಕೆಯ ಅಂಕಿ-ಅಂಶ ಇಳಿಮುಖವಾಗಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಇಳಿಕೆ ಕಾಣುತ್ತಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ವೈಮಾನಿಕ ಆ್ಯಕ್ಷನ್ ಸಿನಿಮಾ ಭಾರತದಲ್ಲಿ ಬುಧವಾರ ಸುಮಾರು 6.35 ಕೋಟಿ ರೂಪಾಯಿ ಗಳಿಸಿದೆ. ಮಂಗಳವಾರ 7.5 ಕೋಟಿ ರೂ. ಗಳಿಸಿದ್ದು, 1.15 ಕೋಟಿ ರೂಪಾಯಿ ಕಡಿಮೆಯಾಗಿದೆ.
ಸ್ಯಾಕ್ನಿಲ್ಕ್ ವರದಿ ಪ್ರಕಾರ, ಫೈಟರ್ ತನ್ನ ಮೊದಲ ವಾರ ಭಾರತದಲ್ಲಿ 140.35 ಕೋಟಿ ರೂ. ಕಲೆಕ್ಷನ್ ಮಾಡಿದ್ದು, 150 ಕೋಟಿ ದಾಟುವ ನಿರೀಕ್ಷೆಯಲ್ಲಿದೆ. ಸದ್ಯ ಈ ಚಿತ್ರಕ್ಕೆ ಯಾವುದೇ ದೊಡ್ಡ ಸಿನಿಮಾದ ಸ್ಪರ್ಧೆಯಿಲ್ಲ. ಈ ಹಿನ್ನೆಲೆ ಶೀಘ್ರವೇ 150 ಕೋಟಿ ರೂ. ದಾಟುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಬುಧವಾರ, ಚಿತ್ರದ ಒಟ್ಟಾರೆ ಆಕ್ಯುಪೆನ್ಸಿ ರೇಟ್ ಶೇ. 11.89 ರಷ್ಟಿತ್ತು. ತನ್ನ ಮೊದಲ ವಾರಾಂತ್ಯ 118.5 ಕೋಟಿ ರೂ. ಗಳಿಸಿ ಉತ್ತಮ ಆರಂಭಿಕ ಕಲೆಕ್ಷನ್ ಪಡೆದಿತ್ತು. ಆದ್ರೆ ಸೋಮವಾರ, ಚಿತ್ರ ಕೇವಲ 8 ಕೋಟಿ ರೂಪಾಯಿಗಳನ್ನು ಗಳಿಸಿತು. ನಂತರ ಈ ಅಂಕಿಅಂಶ ಇಳಿಯುತ್ತಲೇ ಸಾಗಿದೆ. ಅದಾಗ್ಯೂ, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಫೈಟರ್ ಉತ್ತಮ ಪ್ರದರ್ಶನ ನೀಡುತ್ತಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ 250 ಕೋಟಿ ರೂ.ಗಳ ಗಡಿ ದಾಟಿದೆ.