ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಫೈಟರ್' ಸಿನಿಮಾ ತೆರೆಕಂಡ ಎರಡೇ ದಿನದಲ್ಲಿ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 50 ಕೋಟಿ ರೂ. ಗಡಿದಾಟುವ ಮೂಲಕ ಎಲ್ಲರ ಹುಬ್ಬೇರಿಸಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ವೈಮಾನಿಕ ಆ್ಯಕ್ಷನ್ ಸಿನಿಮಾ ಗುರುವಾರ ತೆರೆಗಪ್ಪಳಿಸಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ಭಾರಿ ಏರಿಕೆ ಕಂಡಿದೆ. ಗಣರಾಜ್ಯೋತ್ಸವದ ರಜಾ ದಿನ ಸಿನಿಮಾಗೆ ಲಾಭ ತಂದುಕೊಟ್ಟಿದೆ. ಸಿನಿಮಾ ತೆರೆಕಂಡ ಮೊದಲ ದಿನ ಭಾರದತದಲ್ಲಿ 24 ಕೋಟಿ ರೂ. ಕಲೆಕ್ಷನ್ ಆಗಿತ್ತು. ಎರಡನೇ ದಿನ 39.5 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಬಾಕ್ಸ್ ಆಫೀಸ್ ಪ್ರಯಾಣವನ್ನು ಉತ್ತಮವಾಗಿಸಿದೆ ಎಂದು ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.
ಈ ಗಮನಾರ್ಹ ಏರಿಕೆ ಮೂಲಕ ಸಿನಿಮಾದ ದೇಶೀಯ ಗಳಿಕೆ 60 ಕೋಟಿ ರೂಪಾಯಿ ದಾಟಿದೆ. ವಾರಾಂತ್ಯದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್ (ದೇಶೀಯ ಮಾರುಕಟ್ಟೆ) 120 ಕೋಟಿಯಿಂದ 150 ಕೋಟಿ ರೂಪಾಯಿವರೆಗೆ ಆಗಬಹುದು ಎಂದು ಅಂದಾಜಿಸಲಾಗಿದೆ. ಸಿನಿಮಾದ 2ಡಿ ಆವೃತ್ತಿ ಶೇ.41ರಷ್ಟು ಆಕ್ಯುಪೆನ್ಸಿ ದರ ಹೊಂದಿತ್ತು. 3ಡಿ ಆವೃತ್ತಿ ಶೇ. 42ರಷ್ಟಿತ್ತು. ಸಂಜೆಯ ಶೋಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದಾರೆ.
ಸಿದ್ಧಾರ್ಥ್ ಆನಂದ್ ಅವರೊಂದಿಗೆ ಹೃತಿಕ್ ಮತ್ತು ದೀಪಿಕಾ ಕೈ ಜೋಡಿಸಿದ್ದರಿಂದ ಗಳಿಕೆಯ ನಿರೀಕ್ಷೆ ಕೊಂಚ ಹೆಚ್ಚೇ ಇತ್ತು. ಮೊದಲ ದಿನದ ಕಲೆಕ್ಷನ್ ನಿರೀಕ್ಷೆ ಸಮೀಪಿಸಿದೆ ಹೊರತು ನಿರೀಕ್ಷೆಗಳನ್ನು ಮೀರಿಸಿಲ್ಲ. ಅದಾಗ್ಯೂ, ನಟನ ಕೊನೆಯ ಸಿನಿಮಾ ವಿಕ್ರಮ್ ವೇದಗೆ ಹೋಲಿಸಿದರೆ ಫೈಟರ್ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ವಿಕ್ರಮ್ ವೇದ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಒಟ್ಟು ಸರಿಸುಮಾರು 80 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆರೆಕಂಡ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಹೃತಿಕ್ ರೋಷನ್ ಅವರ ಚಿತ್ರ ಅಂದ್ರೆ ಅದು 'ವಾರ್'. 2019 ರಲ್ಲಿ ಬಂದ ಈ ಸಿನಿಮಾ ಮೊದಲ ದಿನ 53 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಜಾಗತಿಕವಾಗಿ ಒಟ್ಟು ಸರಿಸುಮಾರು 470 ಕೋಟಿ ರೂ. ಗಳಿಸಿತ್ತು. ಸಿದ್ಧಾರ್ಥ್ ಆನಂದ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಅವರುಗಳ ಇತ್ತೀಚಿನ ಸಿನಿಮಾಗಳಾದ ಪಠಾಣ್ ಮತ್ತು ಅನಿಮಲ್ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ.