ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಚಿತ್ರ 'ಫೈಟರ್' ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಉತ್ತಮ ಅಂಕಿ ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸುವ ಎಲ್ಲ ಲಕ್ಷಣಗಳಿವೆ. ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಇದೇ ಜನವರಿ 25 ರಂದು ತೆರೆಕಾಣಲಿರುವ 'ಫೈಟರ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ಸ್ ಮೂಲಕ ಮೊದಲ ದಿನಕ್ಕೆ 4.06 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಭಾರತದಾದ್ಯಂತ ಚಿತ್ರದ ಮೊದಲ ದಿನ ಸಿನಿಮಾ ವೀಕ್ಷಿಸಲು ಒಟ್ಟು 1,26,985 ಟಿಕೆಟ್‌ಗಳು ಮಾರಾಟವಾಗಿವೆ ಎಂದು 'ಸ್ಯಾಕ್ನಿಲ್ಕ್' ವರದಿ ಮಾಡಿದೆ. ಮುಂಗಡ ಬುಕಿಂಗ್ ವಿಚಾರದಲ್ಲಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ದೆಹಲಿ ಮುಂಚೂಣಿಯಲ್ಲಿದೆ.
ದೇಶಾದ್ಯಂತ ಫೈಟರ್ ಸಿನಿಮಾ ಕ್ರೇಜ್ ಜೋರಾಗಿಯೇ ಇದೆ. ಸಿನಿಮಾ ಮೇಲಿನ ಪ್ರೇಕ್ಷಕರ ನಿರೀಕ್ಷೆ ಕೊಂಚ ಹೆಚ್ಚೇ ಇದೆ. ಭಾರತದ ಗಡಿ ದಾಟಿ, ಸಾಗರೋತ್ತರ ಪ್ರದೇಶಗಳಲ್ಲಿಯೂ ಸಿನಿಮಾ ಬೆಗೆಗಿನ ಉತ್ಸಾಹ ಎದ್ದು ಕಾಣುತ್ತಿದೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್ ವಿಚಾರದಲ್ಲಿ ಅಮೆರಿಕ, ಕೆನಡಾದಲ್ಲಿಯೂ ಸಹ ಅತ್ಯುತ್ತಮ ಅಂಕಿ - ಅಂಶಗಳು ದಾಖಲಾಗಿವೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಈಗಾಗಲೇ $300K (ಅಡ್ವಾನ್ಸ್ ಬ್ಯುಸಿನೆಸ್) ಅನ್ನು ಮೀರಿದೆ. ಇದು ವಿಕ್ರಮ್ ವೇದ ಮತ್ತು ವಾರ್ನಂತಹ ಹೃತಿಕ್ ಅವರ ಹಿಂದಿನ ದಾಖಲೆಗಳನ್ನು ಮೀರಿಸುವ ನಿರೀಕ್ಷೆ ಇದೆ.
ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದಾರೆ. "ಫೈಟರ್ ಸಾಗರೋತ್ತರ ಪ್ರದೇಶಗಳಲ್ಲಿನ ಅಡ್ವಾನ್ಸ್ ಬುಕಿಂಗ್: ಯುಎಸ್ಎ/ಕೆನಡಾದಲ್ಲಿ ಉತ್ತಮವಾಗಿದೆ. ಪ್ರೀ ಸೇಲ್ಸ್ ಬ್ಯುಸಿನೆಸ್ ಈಗಾಗಲೇ $ 300K ಅನ್ನು ದಾಟಿದೆ. ಹೃತಿಕ್ ರೋಷನ್ ಅವರ ಕೊನೆಯ ವಿಕ್ರಮ್ ವೇದ ($370K) ಮತ್ತು ವಾರ್ ($311K) ಸಿನಿಮಾಗಳ ಅಡ್ವಾನ್ಸ್ ಟಿಕೆಟ್ಸ್ ವ್ಯವಹಾರವನ್ನು ಸುಲಭವಾಗಿ ಮೀರಿಸುವ ನಿರೀಕ್ಷೆ ಇದೆ'' ಎಂದು ಬರೆದು ಕೊಂಡಿದ್ದಾರೆ.
2023ರ ಬ್ಲಾಕ್ಬಸ್ಟರ್ ಸಿನಿಮಾ 'ಪಠಾಣ್' ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇನದ ಫೈಟರ್ ಚಿತ್ರದಲ್ಲಿ ಇದೇ ಮೋದಲ ಬಾರಿಗೆ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಚಿತ್ರದ ಮೂಲಕ ರಣ್ಬೀರ್ ಕಪೂರ್ ಅವರ ಬಚ್ನಾ ಏ ಹಸೀನೋ (2008) ಮತ್ತು ಶಾರುಖ್ ಖಾನ್ ಅವರ ಪಠಾಣ್ (2023) ನಂತರ ಸಿದ್ಧಾರ್ಥ್ ಆನಂದ್ ಅವರೊಂದಿಗೆ ನಟಿ ದೀಪೀಕಾ ಪಡುಕೋಣೆ ಮೂರನೇ ಬಾರಿ ಕೆಲಸ ಮಾಡಿದ್ದಾರೆ. ಹೃತಿಕ್ ಅವರಿಗೂ ಕೂಡ ಸಿದ್ಧಾರ್ಥ್ ಜೊತೆ ಇದು ಮೂರನೇ ಚಿತ್ರ. ಈ ಹಿಂದೆ ಕತ್ರಿನಾ ಕೈಫ್ ಜೊತೆಗಿನ ಬ್ಯಾಂಗ್ ಬ್ಯಾಂಗ್ (2014) ಮತ್ತು ಟೈಗರ್ ಶ್ರಾಫ್ ಜೊತೆಗಿನ ಆ್ಯಕ್ಷನ್-ಪ್ಯಾಕ್ಡ್ ಸಿನಿಮಾ ವಾರ್ (2019)ನಲ್ಲಿ ಹೃತಿಕ್-ಸಿದ್ದಾರ್ಥ್ ಒಟ್ಟಿಗೆ ಕೆಲಸ ಮಾಡಿದ್ದರು.
ಇದನ್ನೂ ಓದಿ:'ಎಮರ್ಜೆನ್ಸಿ' ರಿಲೀಸ್ ಡೇಟ್ ಅನೌನ್ಸ್: ತೆರೆ ಮೇಲೆ ಬರಲಿದೆ ಇಂದಿರಾ ಗಾಂಧಿ ಆಡಳಿತಾವಧಿ
'ಫೈಟರ್'ನಲ್ಲಿ ದೀಪಿಕಾ ಮತ್ತು ಹೃತಿಕ್ ಅಲ್ಲದೇ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹಯೋಗದೊಂದಿಗೆ ವಯಾಕಾಮ್ 18 ಸ್ಟುಡಿಯೋಸ್ ನಿರ್ಮಾಣದ ಈ ಸಿನಿಮಾ ಗಣರಾಜ್ಯೋತ್ಸವಕ್ಕೂ ಒಂದು ದಿನ ಮುನ್ನ ಬಿಡುಗಡೆಯಾಗಲಿದೆ. 'ಫೈಟರ್' ಭಾರತೀಯ ಸಶಸ್ತ್ರ ಪಡೆಗಳ ತ್ಯಾಗ ಮತ್ತು ದೇಶಭಕ್ತಿಗೆ ಸೂಚಿಸುತ್ತಿರುವ ಗೌರವ ಎಂದು ಚಿತ್ರತಂಡ ಹೇಳಿಕೊಂಡಿದೆ. ಶ್ರೀನಗರ ಕಣಿವೆಯಲ್ಲಿ ಉಗ್ರಗಾಮಿ ಚಟುವಟಿಕೆಗಳ ನಿಯಂತ್ರಣಕ್ಕೆ ನಿಯೋಜಿಸಲಾದ ಹೊಸ ಯೂನಿಟ್ 'ಏರ್ ಡ್ರ್ಯಾಗನ್'ಗಳ ಕಥೆಯನ್ನು ಫೈಟರ್ ಮೂಲಕ ತೆರೆಮೇಲೆ ತರುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ:'ರಾಮಲಲ್ಲಾ' ಪ್ರಾಣ ಪ್ರತಿಷ್ಠಾಪನೆ: ದೇಶಾದ್ಯಂತ ಪ್ರಜ್ವಲಿಸಿದ 'ರಾಮಜ್ಯೋತಿ' - ಫೋಟೋಗಳಿಲ್ಲಿವೆ
ಸಿದ್ಧಾರ್ಥ್ ಆನಂದ್ ಅವರೊಂದಿಗೆ ದೀಪಿಕಾ ಪಡುಕೋಣೆ ಭಿನ್ನಾಭಿಪ್ರಾಯ ಹೊಂದಿದ್ದಾರೆಂಬ ಊಹಾಪೋಹ ಇತ್ತು. ವದಂತಿಗೆ ಫುಲ್ ಸ್ಟಾಪ್ ಇಟ್ಟಿರುವ ದೀಪಿಕಾ, ಫೈಟರ್ ಪ್ರಮೋಶನ್ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಇದೇ ಶುಕ್ರವಾರ ತೆರೆಕಾಣಲಿದೆ.