ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ 5 ಸಿನಿಮಾಗಳ ಟೈಟಲ್ ಲಾಂಚ್ ಮಾಡಿಸಿ ಸದ್ದು ಮಾಡಿದ್ದ ನಿರ್ಮಾಪಕ ಕಂ ನಿರ್ದೇಶಕ ಆರ್.ಚಂದ್ರು ನುಡಿದಂತೆ ಐದು ಸಿನಿಮಾಗಳಲ್ಲಿ ಮೊದಲನೆದಾಗಿ 'ಫಾದರ್' ಸಿನಿಮಾದ ಶೂಟಿಂಗ್ ಅನ್ನು ಮುಕ್ತಾಯದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ರಾಜ್ ಮೋಹನ್ ನಿರ್ದೇಶನದಲ್ಲಿ ಫಾದರ್ ಸಿನಿಮಾ ಮೂಡಿ ಬರುತ್ತಿದ್ದು, ಕೊನೆಯ ಹಂತದ ಚಿತ್ರೀಕರಣ ಆನೇಕಲ್ ತಾಲೂಕಿನ ಐತಿಹಾಸಿಕ ದೇವಾಲಯ ಶ್ರೀ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದೆ.
ಚಂಪಕಧಾಮಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಜೂನಿಯರ್ ಆರ್ಟಿಸ್ಟ್ ಜೊತೆಗೆ ಫಾದರ್ ಚಿತ್ರದ ಸಾಹಸ ದೃಶ್ಯಗಳು ಸೆರೆಯಾಗುತ್ತಿವೆ. ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ಸುಜ್ಞಾನಮೂರ್ತಿ ಛಾಯಾಗ್ರಹಣದಲ್ಲಿ ಚಿತ್ರ ಮೂಡಿ ಬರುತ್ತಿದೆ.
ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್ ನಟನೆಯ ತಂದೆ-ಮಗನ ಬಾಂಧವ್ಯ ಸಾರುವ ಮನಮುಟ್ಟುವ ಸಿನಿಮಾವೇ 'ಫಾದರ್'. ಸದ್ದಿಲ್ಲದೇ ಶೂಟಿಂಗ್ ನಡೆಸುತ್ತಿದ್ದ ಫಾದರ್ ಟೀಂ ಈಗ ಕೊನೆ ಹಂತದ ಚಿತ್ರಕರಣದಲ್ಲಿದೆ. ಕೆಲವೇ ದಿನಗಳಲ್ಲಿ ಆ್ಯಕ್ಷನ್ ದೃಶ್ಯಗಳಿಗಾಗಿ 'ಫಾದರ್' ತಂಡ ವಾರಣಾಸಿಗೆ ಪ್ರಯಾಣ ಬೆಳಸಲಿದೆ. ಶೀಘ್ರದಲ್ಲೇ ಆರ್.ಸಿ.ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರ ತಂಡದಿಂದ ಮತ್ತಷ್ಟು ಅಪ್ಡೇಟ್ಸ್ ಹೊರಬೀಳಲಿವೆ.
ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಅತ್ಯಂತ ಜನಪ್ರಿಯ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ಹಾಗೂ ಲವ್ ಮಾಕ್ಟೇಲ್ ಮೂಲಕ ಹೆಚ್ಚು ಜನಪ್ರಿಯರಾಗಿರುವ ಡಾರ್ಲಿಂಗ್ ಕೃಷ್ಣ ತಂದೆ-ಮಗನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಈ ಹಿಂದೆ ಮೈಸೂರಿನಲ್ಲಿ ನಡೆದಿತ್ತು. 100 ವರ್ಷಗಳ ಹಳೇ ಮನೆಯಲ್ಲಿ ಚಿತ್ರೀಕರಣ ನಡೆದಿತ್ತು, ಅಂದು ಚಿತ್ರತಂಡ ಒಂದಿಷ್ಟು ಮಾಹಿತಿ ಹಂಚಿಕೊಂಡಿತ್ತು.