ಪಿರಿಯಾಪಟ್ಟಣ (ಮೈಸೂರು): ಇನ್ಶೂರೆನ್ಸ್ ಹಣದ ಆಸೆಗಾಗಿ ತಂದೆಯನ್ನೇ ಕೊಲೆ ಮಾಡಿದ ಮಗನೊಬ್ಬ ಬಳಿಕ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಕಥೆ ಹೆಣೆಯಲು ಯತ್ನಿಸಿದ ಪ್ರಕರಣ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಹತ್ಯೆ ಮಾಡಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯ ಪಾಂಡು ಎಂಬಾತನೇ ತನ್ನ ತಂದೆ ಅಣ್ಣಪ್ಪ ಅವರನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಪಿರಿಯಾಪಟ್ಟಣದ ಬೈಲುಕುಪ್ಪೆ ಬಳಿ ಬುಧವಾರ ಈ ಘಟನೆ ನಡೆದಿದೆ.
ವಿಮೆ ಹಣಕ್ಕಾಗಿ ತಂದೆಯ ಕೊಲೆ: ಅಣ್ಣಪ್ಪನ ಹೆಸರಲ್ಲಿ ವಿಮೆ ಮಾಡಿಸಿದ ಮಗ ಪಾಂಡು, ಆ ಹಣದ ಆಸೆಗೆ ಕೃತ್ಯ ಎಸಗಿದ್ದಾನೆ. 'ನಿಮಗೆ ಟಿಬೇಟಿಯನ್ ಮೊದಲನೇ ಕ್ಯಾಂಪಿನಲ್ಲಿ ಕೆಲಸ ಇದೆ, ನೀವು ಹೋಗಿ' ಎಂದು ತಂದೆಗೆ ಹೇಳಿರುವ ಆರೋಪಿ, ಬಳಿಕ ಹಿಂಬದಿಯಿಂದ ಫಾಲೋ ಮಾಡಿಕೊಂಡು ಬಂದು ತಲೆ ಭಾಗಕ್ಕೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಅಣ್ಣಪ್ಪ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಆರೋಪಿಯು ತಂದೆಯ ಶವವನ್ನು ಬಿ.ಎಂ. ರಸ್ತೆಯ ಮಂಚ ದೇವನಹಳ್ಳಿ ಸಮೀಪ ಬಿಸಾಡಿದ್ದಾನೆ. ಸ್ವಲ್ಪ ಸಮಯದ ನಂತರ ಪೊಲೀಸ್ ಠಾಣೆಗೆ ಬಂದು ತನ್ನ ತಂದೆಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿ ದೂರು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಟ್ರ್ಯಾಕ್ಟರ್ ಹತ್ತಿಸಿ ತಮ್ಮನ ಕೊಂದ ಅಣ್ಣ
ಪಾಂಡು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡ ಅನುಮಾನದ ಮೇಲೆ ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ಧಾನೆ. ತನ್ನ ತಂದೆ ಹೆಸರಿನಲ್ಲಿ ಇನ್ಶೂರೆನ್ಸ್ ಇದೆ. ಹೀಗಾಗಿ, ಅವರು ಅಪಘಾತದಲ್ಲಿ ಸಾವನ್ನಪ್ಪಿದರೆ ಡಬಲ್ ಹಣ ಸಿಗುವ ಆಸೆಯಲ್ಲಿ ಈ ಕೃತ್ಯ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ಧಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ, ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ದುಃಖಿತನಾದ ಅಣ್ಣಪ್ಪ ಅವರ ಅಣ್ಣ ಧರ್ಮ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಬೈಲುಕುಪ್ಪೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 20 ಸಾವಿರಕ್ಕಾಗಿ ಪಾರ್ಟ್ನರ್ಸ್ ನಡುವೆ ಆರಂಭವಾದ ಗಲಾಟೆ ಹತ್ಯೆಯಲ್ಲಿ ಅಂತ್ಯ