ನವದೆಹಲಿ:ಭಾರತದ ಅತ್ಯಂತ ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾದ ರೋಹಿತ್ ಬಾಲ್ ಅವರು ಹೃದಯಾಘಾತದಿಂದ ದಕ್ಷಿಣ ದೆಹಲಿಯ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು ಎಂದು ಭಾರತೀಯ ಫ್ಯಾಷನ್ ವಿನ್ಯಾಸ ಮಂಡಳಿ (ಎಫ್‌ಡಿಸಿಐ) ಅಧ್ಯಕ್ಷ ಸುನಿಲ್ ಸೇಥಿ ತಿಳಿಸಿದ್ದಾರೆ.
63 ವರ್ಷದ ರೋಹಿತ್ ಬಾಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಈ ವರ್ಷ ಅಕ್ಟೋಬರ್‌ನಲ್ಲಿ ರೋಹಿತ್ ಲ್ಯಾಕ್ಮೆ ಫ್ಯಾಷನ್ ವೀಕ್ X FDCI 2024ರ ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ವಿನ್ಯಾಸಗಳನ್ನು ಪ್ರಸ್ತುತಪಡಿಸಿದ್ದರು.
"ಅವರು ನಿಧನರಾಗಿರುವುದು ನಿಜ. ಅವರಿಗೆ ಹೃದಯ ಸ್ತಂಭನವಾಗಿದೆ.. ಹೃದಯ ವೈಫಲ್ಯಗೊಂಡಿದೆ. ರೋಹಿತ್ ಒಬ್ಬ ದಂತಕಥೆ. ನಾವು ಅಸಹಾಯಕರಾಗಿದ್ದೇವೆ, ಆತ್ಮವಿಶ್ವಾಸ ಕಳೆದುಕೊಂಡಿದ್ದೇವೆ. ನಾಳೆ ನಡೆಸುವ ಅಂತ್ಯಕ್ರಿಯೆಯ ಪೂರ್ವಸಿದ್ಧತೆಗಾಗಿ ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಸುನಿಲ್ ಸೇಥಿ ಮಾಧ್ಯಮಕ್ಕೆ ಹೇಳಿದ್ದಾರೆ.
ವಿನ್ಯಾಸಕಾರ ರೋಹಿತ್ ಬಾಲ್ರನ್ನು ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿರುವ ಆಶ್ಲೋಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಅಲೋಕ್ ಚೋಪ್ರಾ ಅವರು ಚಿಕಿತ್ಸೆ ನೀಡಿದ್ದರು. ಅವರನ್ನು ಉಳಿಸಲು ವೈದ್ಯರು ಎರಡು ಗಂಟೆಗಳ ಕಾಲ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ" ಎಂದೂ ಸೇಥಿ ತಿಳಿಸಿದ್ದಾರೆ.
ಇದನ್ನೂ ಓದಿ:ಆಸ್ಪತ್ರೆಗೆ ದಾಖಲಾದ ದರ್ಶನ್: 2 ದಿನ ಹಾಸ್ಪಿಟಲ್ನಲ್ಲೇ ಚಿಕಿತ್ಸೆ