ಸಿನಿಮಾ ಎಂಬ ಬಣ್ಣದ ಲೋಕ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ. ಹೊರಗಡೆಯಿಂದ ಈ ಲೋಕ ತುಂಬಾನೇ ಕಲರ್‌ಫುಲ್ ಅನಿಸುತ್ತದೆ. ಆದರೆ ಒಳಹೊಕ್ಕಾಗಲೇ ಅಸಲಿ ವಿಚಾರ ಗೊತ್ತಾಗೋದು. ನಟಿ ಎರಿಕಾ ಫರ್ನಾಂಡಿಸ್ ಅವರಿಗೂ ಇಂಥದ್ದೇ ಒಂದು ಅನುಭವವಾಗಿದೆಯಂತೆ.
ಎರಿಕಾ ಫರ್ನಾಂಡಿಸ್ ಗೊತ್ತಲ್ವೇ? ಪುನೀತ್ ರಾಜ್ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಮಂಗಳೂರಿನ ಬೆಡಗಿ. ನಿನ್ನಿಂದಲೇ ಚಿತ್ರಕ್ಕೂ ಮುನ್ನ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದ ಇವರು, ನಿನ್ನಿಂದಲೇ ಸಿನಿಮಾ ನಂತರ ಮುಂಬೈ ವಿಮಾನ ಹತ್ತಿದ್ದರು. ಅಲ್ಲಿ 'ಬಬ್ಲೂ ಹ್ಯಾಪಿ ಹೈ' ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದರು. ವಿಶೇಷ ಅಂದರೆ, ಎರಿಕಾ ಫರ್ನಾಂಡಿಸ್ ಬದುಕಿನಲ್ಲಿ ಇದೆಲ್ಲವೂ ಘಟಿಸಿದ್ದು ಕೇವಲ ಒಂದೇ ವರ್ಷದಲ್ಲಿ.
ಒಂದೇ ವರ್ಷದಲ್ಲಿ ತಮಿಳು, ಕನ್ನಡ ಹಾಗೂ ಹಿಂದಿಯಲ್ಲಿ ನಟಿಸಿದ್ದ ಎರಿಕಾ ಅವರನ್ನು ತಡೆದು ನಿಲ್ಲಿಸುವವರು ಯಾರೂ ಇಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಒಂದೇ ವರ್ಷದಲ್ಲಿ ಮೂರು ಭಾಷೆಯಲ್ಲಿ ಬಣ್ಣ ಹಚ್ಚಿದ ಸಂಭ್ರಮ ಎರಿಕಾ ಅವರಲ್ಲೂ ಇತ್ತು. 2014ರಲ್ಲಿ ಈ ಸಂಭ್ರಮ ಇನ್ನೂ ದುಪ್ಪಟ್ಟಾಯಿತು. 2014ರಲ್ಲೂ ಕೂಡ ಮೂರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ಆ ಮೂರರಲ್ಲಿ ಒಂದು ತಮಿಳು ಚಿತ್ರವಾದರೆ, ಮಿಕ್ಕೆರಡು ತೆಲುಗು ಸಿನಿಮಾಗಳಾಗಿದ್ದವು.
ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ಬೆಳ್ಳಿ ಪರದೆ ಮೇಲೆ ಮಿಂಚಬೇಕಿದ್ದ ನಟಿ ಏಕಾಏಕಿ ಕಾಣೆಯಾದರು. ಎಲ್ಲಿ ಹೋದರು? ಎಂದು ಎಲ್ಲರೂ ಹುಡುಕುವ ಸಂದರ್ಭದಲ್ಲಿ ಇವರು ಕಂಡಿದ್ದು ಕಿರುತೆರೆಯಲ್ಲಿ. ಚಿತ್ರರಂಗದಲ್ಲಿ ನಾಯಕಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದ ಎರಿಕಾರನ್ನು ಕಿರುತೆರೆಯಲ್ಲಿ ಕಂಡ ಅನೇಕರು ನಿಜಕ್ಕೂ ಅಚ್ಚರಿಗೊಳಗಾಗಿದ್ದರು. ಹಿರಿತೆರೆ ಬಿಟ್ಟು ಕಿರುತೆರೆಯಲ್ಲಿ ಏನ್ಮಾಡ್ತಿದ್ದಾರೆ ಎಂದು ಪ್ರಶ್ನೆಯನ್ನೂ ಕೇಳಿದ್ದರು. ಆ ಪ್ರಶ್ನೆಗಳಿಗೆ ಎರಿಕಾ ಫರ್ನಾಂಡಿಸ್ ಈಗ ಉತ್ತರ ಕೊಟ್ಟಿದ್ದಾರೆ. ಹಳಿ ತಪ್ಪಿದ್ಹೇಗೆ? ತಪ್ಪಲು ಕಾರಣವೇನು? ಎನ್ನುವುದನ್ನು ವಿವರಿಸಿದ್ದಾರೆ. ಬಾಲಿವುಡ್ನ ಮತ್ತೊಂದು ಮುಖ ಕಂಡು ಬೆಚ್ಚಿ ಬಿದ್ದಿದ್ದೆ ಅಂದಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ಎರಿಕಾ ತಮ್ಮ ಮನದ ನೋವು ಹಂಚಿಕೊಂಡರು. ಬಾಲಿವುಡ್ನಲ್ಲಿ ನೆಲೆಯೂರಬೇಕೆಂಬ ಕನಸು ಹೊತ್ತು, ಮುಂಬೈನಲ್ಲಿ ನಾನು ಅಲೆದಾಡಿದ್ದೆ. ಅನೇಕ ಕಡೆ ಆಡಿಷನ್‌ಗಳನ್ನೂ ಕೊಟ್ಟು ಬಂದಿದ್ದೆ. ಆಡಿಷನ್ ಕೊಟ್ಟ ನಂತರ ನನ್ನ ಅಭಿನಯದಿಂದ ಪ್ರಭಾವಕ್ಕೊಳಗಾದ ಅನೇಕ ನಿರ್ದೇಶಕರು ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂಬ ಆಶ್ವಾಸನೆಯನ್ನೂ ಕೊಟ್ಟು ಕಳಿಸಿದ್ದರು. ಆದರೆ ಆ ನಂತರ ಕೇಳಿದಾಗ ನಿಮ್ಮ ಬದಲು ಸ್ಟಾರ್ ಹೀರೋಯಿನ್ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು. ಇನ್ನೂ ಹಲವರು ಸ್ಟಾರ್ ಕಿಡ್ಸ್ಗೆ ಮಣೆ ಹಾಕಿದರು. ಯಾರು ಏನೇ ಹೇಳಲಿ ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಇದ್ದೇ ಇದೆ ಎನ್ನುತ್ತಾರೆ ಎರಿಕಾ ಫರ್ನಾಂಡಿಸ್.